ಹೊಸದಿಗಂತ ವರದಿ, ಬೆಂಗಳೂರು:
ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಮಾದಕ ವಸ್ತು ಕುರಿತು ಪೊಲೀಸರು ನಡೆಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಿರುವ ಒಟ್ಟು 59.16 ಕೋಟಿ ರೂ ಬೆಲೆಬಾಳುವ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ
ರಾಜ್ಯಾದ್ಯಂತ ಫೆ.8 ಮತ್ತು 9ರಂದು ವಶಪಡಿಸಿಕೊಂಡ ಮಾದಕವಸ್ತುಗಳ ನಾಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಪ್ತಿಮಾಡಿರುವ ಮಾದಕಗಳು ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ರಾಜ್ಯದ ಆಯಾ ಪೊಲೀಸ್ ಆಯುಕ್ತರು, ಡಿಸಿಪಿಗಳು ಮತ್ತು ಎಸ್‌ಪಿಗಳ ನೇತೃತ್ವದಲ್ಲಿ ಡ್ರಗ್ಸ್ ವಿಲೇವಾರಿ ಸಮಿತಿಗಳನ್ನು ರಚಿಸಲಾಗಿದ್ದು, ಒಟ್ಟು 5835.51 ಕೆ.ಜಿ ಗಾಂಜಾ, 7.847 ಕೆ.ಜಿ ಎಂಡಿಎಂಎ ಸೇರಿ ಒಟ್ಟು 42. 15 ಕೋಟಿ ರೂ ಮಾದಕವಸ್ತುಗಳನ್ನು ನಾಶಮಾಡಲಾಗಿದೆ.
ಕೇಂದ್ರವಲಯದ 6 ಜಿಲ್ಲೆಗಳು, ದಕ್ಷಿಣ ವಲಯದ 5 ಜಿಲ್ಲೆಗಳು, ಬೆಂಗಳೂರು ನಗರ ಹಾಗೂ ಮೈಸೂರು ನಗರದಲ್ಲಿ ವಶಪಡಿಸಿಕೊಂಡಿರುವ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ. ಅದೇ ರೀತಿ ನಗರದ ಹೊರವಲಯದ ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ ಶುಕ್ರವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಒಟ್ಟು 3885.5 ಕೆ.ಜಿ ಗಾಂಜಾ, 52.5 ಕೆ.ಜಿ ಎಂಡಿಎಂಎ, ಎಲ್‌ಎಸ್‌ಡಿ, ಹಶಿಸ್, ಗಾಂಜಾ ಆಯಿಲ್, ಹೆರಾಯಿಸ್ ಸೇರಿದಂತೆ ಇತರೆ ಮಾದಕವಸ್ತುಗಳು ಸೇರಿ ಒಟ್ಟು 36.65 ಕೋಟಿ ರೂ ಮೌಲ್ಯದ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ. ಅಲ್ಲದೇ, 17 ಕೋಟಿ ರೂ ಮೌಲ್ಯದ 15 ಕೆ.ಜಿ ಓಪಿಯಮ್ ಎನ್‌ಡಿಪಿಎಸ್ ಕಾಯ್ದೆಯನ್ವಯ ನಾಶಮಾಡಲು ಘಾಜೀಪುರಕ್ಕೆ ಕಳುಹಿಸಲಾಗಿದೆ.