ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ ದಂಧೆ ದಿನೇದಿನೇ ಹೆಚ್ಚುತ್ತಿದ್ದು, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದಗದ ಮತ್ತೆ ಇಬ್ಬರನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಅಮ್ಮತ್ತಿ ನಿವಾಸಿಯಾದ ಎನ್.ಎ.ಪೊನ್ನಣ್ಣ( 46 ) ಹಾಗೂ ವೀರಾಜಪೇಟೆಯ ಸುಂಕದಕಟ್ಟೆ ನಿವಾಸಿ ಹೆಚ್.ಆರ್. ಲೋಹಿತ್( 26 ) ಬಂಧಿತ ಆರೋಪಿಗಳಾಗಿದ್ದು, ಅವರಿಂದ 104 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಅಮ್ಮತ್ತಿಯ ಮುತ್ತಪ್ಪ ದೇವಸ್ಥಾನದ ಸಮೀಪದ ಬಸ್ ನಿಲ್ದಾಣದ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ವೀರಾಜಪೇಟೆ ಡಿವೈಎಸ್ಪಿ ಆರ್. ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರಪ್ಪ, ಗ್ರಾಮಾಂತರ ಠಾಣಾಧಿಕಾರಿ ಸಿ.ಸಿ.ಮಂಜುನಾಥ ಹಾಗೂ ಸಿಬ್ಬಂದಿಗಳು ಸೋಮವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.