ಹೊಸದಿಗಂತ ವರದಿ ಮಂಗಳೂರು:
ನಗರದ ರಥಬೀದಿಯ ಕಡಬ ಸಂಸ್ಮರಣಾ ಸಮಿತಿ ವತಿಯಿಂದ ನೀಡಲ್ಪಡುವ ಚತುರ್ಥ ವಾರ್ಷಿಕ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ-2023’ಕ್ಕೆ ಹಿರಿಯ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅ.29ರಂದು ಮಧ್ಯಾಹ್ನ 2ಕ್ಕೆ ಮುಂಬೈನ ಗೋರೆಗಾಂವ್ (ಪಶ್ಚಿಮ) ಆರೇ ರೋಡ್, ಅಂಬಾಬಾಯಿ ದೇವಸ್ಥಾನದ ಬಳಿಯ ಕೇಶವಗೋರೆ ಸಭಾಗೃಹದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ಯಕ್ಷಗಾನ-ನಾಟ್ಯ ವೈಭವ ಹಾಗೂ ವಾಲಿಮೋಕ್ಷ ತಾಳಮದ್ದಳೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕಡಬ ಪ್ರಶಸ್ತಿ:
ಸುರತ್ಕಲ್ ಮೇಳದಲ್ಲಿ ಹೆಸರಾಂತ ಹಿಮ್ಮೇಳ ವಾದಕರಾದ ಕಡಬ ನಾರಾಯಣ ಆಚಾರ್ಯ ಅವರು 3 ದಶಕಗಳ ಕಾಲ ಕಲಾ ಸೇವೆಗೈದು 2008ರಲ್ಲಿ ತನ್ನ 51ನೇ ವಯಸ್ಸಿನಲ್ಲಿ ಕಲಾಲೀನರಾಗಿದ್ದಾರೆ. ತಂದೆಯಷ್ಟೇ ಪ್ರತಿಭಾನ್ವಿತರಾಗಿದ್ದ ಅವರ ಪುತ್ರ ಕಡಬ ವಿನಯ ಆಚಾರ್ಯ ಅವರು ಅತೀ ಕಿರಿಯ ವಯಸ್ಸಿನಲ್ಲಿ ಸುಮಾರು 15 ವರ್ಷಗಳ ಕಾಲ ಹಿರಿಯ ಕಲಾವಿದರೊಡಗೂಡಿ ಉತ್ತಮ ಮದ್ದಳೆಗಾರನಾಗಿ ಜನಮೆಚ್ಚುಗೆ ಗಳಿಸುತ್ತಿರುವ ಸಂದರ್ಭ ತನ್ನ 34ನೇ ವಯಸ್ಸಿನಲ್ಲಿ 2019ರಲ್ಲಿ ಅನಾರೋಗ್ಯದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಈ ಮಹಾನ್ ಕಲಾವಿದರ ಕಾರ್ಯಗಳು ಅಳಿದರೂ ಅವರ ಕೀರ್ತಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ, ಸಮಾಜದ ಗಣ್ಯರು, ಕಲಾವಿದರು, ಅಭಿಮಾನಿ ಬಂಧು-ಬಳಗ ಒಟ್ಟು ಸೇರಿ ‘ಕಡಬ ಸಂಸ್ಮರಣಾ ಸಮಿತಿ’ ರಚಿಸಿ ಇಬತ ಸ್ಮರಣಾರ್ಥವಾಗಿ ವರ್ಷಂಪ್ರತಿ ಯಕ್ಷಗಾನ ಕ್ಷೇತ್ರದ ಓರ್ವ ಹಿರಿಯ ಸಾಧಕರನ್ನು ಗುರುತಿಸಿ ನಗದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ:
ಓರ್ವ ಸಮರ್ಥ ವೇಷಧಾರಿಯಾಗಿ ಉಭಯ ತಿಟ್ಟುಗಳ ಪ್ರತಿಭಾವಂತ ಭಾಗವತರಾಗಿ ತನ್ನನ್ನು ತಾನು ಯಕ್ಷಗಾನ ಕಲೆಗೆ ಅರ್ಪಿಸಿಕೊಂಡವರು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು. ಉದ್ಯೋಗ ನಿಮಿತ್ತ ಮುಂಬೈಯನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡು ಸುಮಾರು ಮೂರುವರೆ ದಶಕಗಳಿಂದ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾಸೇವೆಗೈದು ಆಟಕೂಟಗಳೆರಡರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿ ಯಕ್ಷರಂಗದಲ್ಲಿ ಕ್ರಾಂತಿಯನ್ನುಂಟು ಮಾಡಿ ತಾರಾಮೌಲ್ಯ ತಂದುಕೊಟ್ಟವರು. ಯಕ್ಷಗಾನವನ್ನು ಮುಂಬೈನಲ್ಲಿ ಉಳಿಸಿ ಬೆಳೆಸುವಲ್ಲಿ ಅವಿರತವಾಗಿ ದುಡಿಯುತ್ತಾ ಯಕ್ಷಗಾನದ ವಿಮಾನ ಭಾಗವತರೆಂದೇ ಪ್ರಸಿದ್ಧಿಯಾಗಿದ್ದಾರೆ.