ಹೊಸದಿಗಂತ ವರದಿ, ಶಿವಮೊಗ್ಗ :
ಕುವೆಂಪು ಸಾಹಿತ್ಯ ಸಮನ್ವಯ, ಸರ್ವೋದಯ, ಬಂಡಾಯದ ಧ್ವನಿಯೇ ಹೊರತು ಧರ್ಮ ವಿರೋಧದ ಅಭಿವ್ಯಕ್ತಿಯಲ್ಲ ಎಂದು ಮಂಗಳೂರು ಕದ್ರಿ ಗೋಕರ್ಣಾಥೇಶ್ವರ ಕಾಲೇಜು ಪ್ರಾಧ್ಯಾಪಕ ಕೇಶವ ಬಂಗೇರಾ ಹೇಳಿದರು.
ಕುಪ್ಪಳ್ಳಿಯ ಕುವೆಂಪು ಅವರ ಕವಿಮನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ವಿಕಾಸ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ವಿವೇಕ ಯಾತ್ರೆಯ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮಾತನಾಡಿದರು.
ವಿವೇಕಾನಂದರು ಈ ಜಗತ್ತಿಗೆ ನೀಡಿದ ಕೊಡುಗೆ ಏನೆಂದರೆ ವ್ಯಕ್ತಿ ನಿರ್ಮಾಣ ಮತ್ತು ವ್ಯಕ್ತಿತ್ವ ನಿರ್ಮಾಣ. ಅದರ ಪ್ರತಿರೂಪವೇ ಕುವೆಂಪು. ವಿವೇಕಾನಂದರು ಸನ್ಯಾಸಿಯಾಗಿ ಇದನ್ನು ಸಾಧಿಸಿದರೆ, ಕುವೆಂಪುರವರು ಸಂಸಾರಿಯಾಗಿದ್ದೂ ಇದನ್ನು ಸಾಸಿದರು. ವಿವೇಕಾನಂದರು ಉಪನ್ಯಾಸ ಮತ್ತು ಯಾತ್ರೆಗಳ ಮೂಲಕ ತನ್ನ ಔನ್ನತ್ಯದ ಪೂರ್ಣ ವಿಚಾರಗಳನ್ನು ಪಸರಿಸಿದರೆ ಕುವೆಂಪು ಸಾಹಿತ್ಯದ ಮೂಲಕ ಪಸರಿಸಿದರು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಆತ್ಮಚರಿತ್ರೆ ನೆನಪಿನ ದೋಣಿಯ ಪುಟ ಪುಟಗಳಲ್ಲಿಯೂ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಸಾಹಿತ್ಯದ ಸಂಸರ್ಗ ಎದ್ದು ಕಾಣುತ್ತದೆ. ಕುವೆಂಪು ಸಾಹಿತ್ಯವನ್ನು ಅವಲೋಕನ ಮಾಡಿದರೆ ವಿವೇಕಾನಂದರು ಪ್ರತಿಪಾದನೆ ಮಾಡಿರುವಂತಹ ವೇದಾಂತದ ದಾರ್ಶನಿಕತೆ ಹಾಗೂ ಧರ್ಮ ಮತ್ತು ಅಧ್ಯಾತ್ಮ ಈ ದೇಶದ ಆತ್ಮವೆಂಬ ನಿಲುವೇ ಪ್ರತಿಪಾದಿತವಾಗಿರುವುದು ಕಾಣುತ್ತದೆ ಎಂದರು.
ಜಿಲ್ಲಾ ಮಟ್ಟದ ಭಾಷಣ, ರಸಪ್ರಶ್ನೆ, ಪ್ರಬಂಧ, ಚಾಗಿಯ ಹಾಡು ಮತ್ತು ಪುಸ್ತಕ ಪರಿಚಯ ಸ್ಪರ್ಧೆಗಳನ್ನು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಉದ್ಘಾಟಿಸಿದರು . ನಂತರ ಮಾತನಾಡಿ, ಕವಿಗಳು ಸಾಧಕರು ಹುಟ್ಟಿ ಬೆಳೆದ ತೀರ್ಥಹಳ್ಳಿಯ ನೆಲಕ್ಕೆ ಪರಿಶ್ರಮದ ಫಲ ನೀಡುವ ಗುಣವಿದೆ. ಸ್ಪರ್ಧೆಗಾಗಿ ಆಗಮಿಸಿದ ವಿದ್ಯಾರ್ಥಿಗಳೆಲ್ಲರಿಗೂ ಸಾಧನೆಯ ಎತ್ತರವನ್ನು ಏರಲು ಈ ನೆಲ ಪ್ರೇರಣೆಯಾಗಲಿ. ಜಗತ್ತು ನಮ್ಮನ್ನು ತಿರುಗಿ ನೋಡವಂತೆ ಮಾಡಿರುವುದರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪಾತ್ರವೂ ಇದೆ ಎಂದರು.
ಆರ್ಎಸ್ಎಸ್ ನಗರ ಸಂಘ ಚಾಲಕ ಬಿ.ಎ ರಂಗನಾಥ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿವೇಕಯಾತ್ರೆಯ ಸಂಚಾಲಕ ಪ್ರವೀಣ್ ಎಚ್ ಕೆ ಉಪಸ್ಥಿತರಿದ್ದರು. ಕಾರ್ಯಕರ್ತರಾದ ಪ್ರಮೋದ್ ಎಂ.ಎಂ ಸ್ವಾಗತಿಸಿ , ಧರಣಿ ನಿರೂಪಿಸಿ, ಪುನೀತ್ ಕೆ ವೈ ವಂದಿಸಿದರು.