ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಇಂದು ನಿಧನರಾಗಿದ್ದಾರೆ.
ಅವರು ಡಬಲ್ ನ್ಯುಮೋನಿಯಾ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಇದೀಗ ಅವರ ನಿಧನದ ಬೆನ್ನಲ್ಲೇ ಮುಂದಿನ ಪೋಪ್ ಆಯ್ಕೆಯ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಪೋಪ್ ಆಯ್ಕೆಯು ಶತಮಾನಗಳಷ್ಟು ಹಳೆಯದಾದ ವ್ಯಾಟಿಕನ್ ಸಂಪ್ರದಾಯದಂತೆ ನಡೆಯುತ್ತದೆ. ಕಾಲೇಜ್ ಆಫ್ ಕಾರ್ಡಿನಲ್ಸ್ ಸದಸ್ಯರು ರಹಸ್ಯ ಮತದಾನ ಮಾಡುವ ಮೂಲಕ ಹೊಸ ಪೋಪ್ ಅನ್ನು ಆಯ್ಕೆ ಮಾಡುತ್ತಾರೆ. ಕಾಲೇಜ್ ಆಫ್ ಕಾರ್ಡಿನಲ್ಸ್‌ನಲ್ಲಿ 120ಕ್ಕೂ ಹೆಚ್ಚು ಸದಸ್ಯರಿದ್ದೂ ಭಾರತದಿಂದಲೂ ಇಬ್ಬರು ಇದ್ದಾರೆ.
ಪೋಪ್ ನಿಧನದ 15ರಿಂದ 20 ದಿನಗಳ ನಂತರ ವ್ಯಾಟಿಕನ್ ಸಿಟಿಯಲ್ಲಿ ಸೇರುವ ಕಾರ್ಡಿನಲ್ಸ್‌ಗಳು ಸಿಸ್ಟಿನ್ ಚಾಪೆಲ್‌ನಲ್ಲಿ ರಹಸ್ಯ ಮತದಾನ ಮಾಡುತ್ತಾರೆ. ಹೊಸ ಪೋಪ್ ಆಯ್ಕೆ ಮಾಡಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಬಹುಮತ ಸಿಗುವವರೆಗೂ ಮತದಾನ ಮುಂದುವರಿಯುತ್ತದೆ.
ಪ್ರತಿ ಸುತ್ತಿನಲ್ಲಿಯೂ ಅಭ್ಯರ್ಥಿ ಆಯ್ಕೆಯಾಗದೇ ಹೋದರೆ ಆ ಬ್ಯಾಲೆಟ್ ಪೇಪರ್‌ಗಳನ್ನು ಸುಡಲಾಗುತ್ತದೆ. ಆಗ ಸಿಸ್ಟಿನ್ ಚಾಪೆಲ್ ಚಿಮಣಿಯಲ್ಲಿ ಕಪ್ಪು ಹೊಗೆ ಕಾಣಿಸಿಕೊಳ್ಳುತ್ತದೆ. ಇದು ಪೋಪ್ ಆಯ್ಕೆಯಾಗಿಲ್ಲ ಎಂಬುವುದನ್ನು ಸೂಚಿಸುತ್ತದೆ. ಯಾವಾಗ ಬಿಳಿ ಹೊಗೆ ಕಾಣಿಸುತ್ತದೆಯೋ ಆಗ ಹೊಸ ಪೋಪ್ ಆಯ್ಕೆಯಾಗಿದ್ದಾರೆ ಎಂದರ್ಥ.