ಕುಶಾಲನಗರದಲ್ಲಿ ಜನಮನ ಸೆಳೆದ ‘ಜನಪರ ಉತ್ಸವ’

ಹೊಸ ದಿಗಂತ ವರದಿ, ಮಡಿಕೇರಿ:

ಕಲೆ ಮತ್ತು ಸಂಸ್ಕೃತಿ ಪ್ರತಿಯೊಬ್ಬರಿಗೂ ಅರ್ಥವಾಗುವ ಮಾಧ್ಯಮವಾಗಿದ್ದು, ಆ ನಿಟ್ಟಿನಲ್ಲಿ ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಕಲಾಪ್ರಕಾರಗಳಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯುವಂತಾಗಬೇಕು ಎಂದು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ.ಅಧ್ಯಕ್ಷೆ ಎಸ್.ಎಸ್.ನಂದಿನಿ ಅವರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕುಶಾಲನಗರ ಬಳಿಯ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ‘ಜನಪರ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಅವರು ಮಾತನಾಡಿ, ಕಲೆಗಳನ್ನು ಗೌರವಿಸಬೇಕು. ನಾಡಿನ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಪ್ರೋತ್ಸಾಹಿಸುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಸರ್ಕಾರ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ಹಲವು ಕಾಯಕ್ರಮ ಹಮ್ಮಿಕೊಂಡಿದೆ. ಆ ದಿಸೆಯಲ್ಲಿ ‘ಜನಪರ ಉತ್ಸವ’ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾಗಮಂಡಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್   ಮಾತನಾಡಿ, ನಾಡಿನಲ್ಲಿ ಹಾಗೂ ಜಿಲ್ಲೆಯಲ್ಲಿ ವಿವಿಧ ಕಲಾಪ್ರಕಾರಗಳು ಇದ್ದು, ಅವುಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಕಲೆ ಮತ್ತು ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

ಕಲಾವಿದ ರವಿಶಂಕರ್ ಅವರು ಮಾತನಾಡಿ, ಪ್ರತಿಯೊಬ್ಬರ ಮನಸ್ಸನ್ನು ಬೆಸೆಯುವುದೇ ಜನಪರ ಉತ್ಸವವಾಗಿದ್ದು, ಎಲ್ಲರನ್ನು ಸೆಳೆಯುವ ಶಕ್ತಿ ಕಲಾಪ್ರಕಾರಗಳಿಗೆ ಇದೆ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮವಾರಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಈ.ರಾಜು, ವೆಂಕಟೇಶ್, ಉಪನ್ಯಾಸಕರು, ಶಿಕ್ಷಕರು, ಕಲಾವಿದರು ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿ, ಮಣಜೂರು ಮಂಜುನಾಥ್ ನಿರೂಪಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ವಿಭಾಗದ ಶಿಕ್ಷಕ ಪುಟ್ಟರಾಜು ಪ್ರಾರ್ಥಿಸಿದರು. ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ ವಂದಿಸಿದರು.

ಜನಮನ ಸೆಳೆದ ಮೆರವಣಿಗೆ
ಕುಶಾಲನಗರದ ಬಸವನಹಳ್ಳಿ ಮುಖ್ಯ ರಸ್ತೆಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದವರೆಗೆ ಜನಪರ ಉತ್ಸವದ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಅಮ್ಮತ್ತಿಯ ಶ್ರೀನಿವಾಸ್ ಅವರ ಕೊಡವ ವಾದ್ಯ ತಂಡ, ಮೊಣ್ಣಂಗೇರಿಯ ಮಾಧವ ಅವರ ತಾಳಮದ್ದಳೆ ತಂಡ, ಅಭಿಷೇಕ್ ತಂಡದಿಂದ ಡೊಳ್ಳು ಕುಣಿತ, ಹರಿಪ್ರಸಾದ್ ತಂಡದವರಿಂದ ಪೂಜಾಕುಣಿತ, ಮಧು ತಂಡದಿಂದ ನಂದಿ ಧ್ವಜ, ಕೆಂಪರಾಜು ತಂಡದವರಿಂದ ಹುಲಿವೇಷ, ದೊಡ್ಡಕರಿಯಯ್ಯ ತಂಡದವರಿಂದ ಗಾರುಡಿಗೊಂಬೆ, ರಾಮು ಮತ್ತು ತಂಡದವರಿಂದ ಚಿಟ್ಟಿಮೇಳ, ಆಂಜನೇಯ ತಂಡದಿಂದ ಸೋಮನಕುಣಿತ, ನಿವೇದಿತ ತಂಡದಿಂದ ನಗಾರಿ ನೃತ್ಯ, ಪ್ರಶಾಂತ್ ತಂಡದವರಿಂದ ಪಟದ ಕುಣಿತ, ಸುನೀತಾ ಮತ್ತು ತಂಡದವರಿಂದ ಭರತನಾಟ್ಯ, ರವಿಶಂಕರ್ ಮತ್ತು ವೆಂಕಟೇಶ್ ತಂಡದವರಿಂದ ಸುಗಮ ಸಂಗೀತ, ಕಂಸಾಳೆ ತಂಡದವರು, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ತಂಡದವರಿಂದ ಗೀತಗಾಯನ ಹೀಗೆ ಹಲವು ತಂಡದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!