ಹೊಸದಿಗಂತ ಡಿಜಿಟಲ್ ಡೆಸ್ಕ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರ ತಾಲೂಕಿನ ಉಯಂಬಳ್ಳಿ ಹೋಬಳಿಯಲ್ಲಿ ಕೆಲ ದಿನಗಳ ಹಿಂದೆ ಏಸು ಪ್ರತಿಮೆ ನಿರ್ಮಾಣ ವಿವಾದ ಭುಗಿಲೆದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ವಿವಾದ ತಣ್ಣಗಾಗುವ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಸದ್ದು ಮಾಡುತ್ತಿದೆ. ಇಲ್ಲಿನ ಮನೆಗಳಿಗೆ ಹಂಚಿಕೆ ಮಾಡಲಾದ ಪಡಿತರ ಚೀಟಿಗಳಲ್ಲಿ ಏಸು ಭಾವಚಿತ್ರ ಮುದ್ರಿಸಲಾಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಚೀಟಿಗಳಲ್ಲಿ ಲಕ್ಷ್ಮೀ ಚಿತ್ರ ಸಹ ಇದೆ.
ಶ್ರೀರಾಮಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಈ ಬಗ್ಗೆ ಕಿಡಿಕಾರಿದ್ದು, ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿವೆ. ಕ್ಷೇತ್ರದಲ್ಲಿ ಜನರ ಮೇಲೆ ಕ್ರಿಶ್ಚಿಯನ್ ಧರ್ಮವನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಘಟನೆಗಳು ಆರೋಪಿಸಿದೆ.
ವಿವಾದ ಭುಗಿಲೆದ್ದ ಬೆನ್ನಲ್ಲೇ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ರಮ್ಯಾ ಮಾತನಾಡಿ, ಸರಕಾರ ಚಿತ್ರಗಳನ್ನು ಮುದ್ರಿಸಿಲ್ಲ. ಇದು ಸ್ಥಳೀಯ ಸೈಬರ್ ಕೆಫೆಯಿಂದ ಮುದ್ರಿಸಲಾದ ಕಾರ್ಡ್ ಮತ್ತು ಸರ್ಕಾರದ್ದು ಅಲ್ಲ ಎಂದು ಹೇಳಿದ್ದಾರೆ.
ಪಡಿತರ ಚೀಟಿಯನ್ನು ನಾವು ಮುದ್ರಿಸಿಲ್ಲ, ಈ ಬಗ್ಗೆ ಇಲಾಖೆಗೆ ದೂರು ಬಂದಿದೆ. ಈ ಚಿತ್ರಗಳ ಮುದ್ರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದ್ದಾರೆ.
2019 ರಲ್ಲಿ ಆಂಧ್ರಪ್ರದೇಶದಿಂದ ಇದೇ ರೀತಿಯ ಘಟನೆ ವರದಿಯಾಗಿದ್ದು, ಏಸುಕ್ರಿಸ್ತನನ್ನು ಚಿತ್ರಿಸುವ ಪಡಿತರ ಚೀಟಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಆಂಧ್ರ ಪ್ರದೇಶ ಸರ್ಕಾರವು ಹಕ್ಕುಗಳನ್ನು ತಳ್ಳಿಹಾಕಿದೆ ಮತ್ತು ಪ್ರಚಾರವನ್ನು ನಡೆಸುವುದಕ್ಕಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯನ ಕುಟುಂಬವನ್ನು ದೂಷಿಸಿದೆ.
2019 ರಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಯೇಸುಕ್ರಿಸ್ತನ ಚಿತ್ರವಿರುವ ಪಡಿತರ ಚೀಟಿ ಕಾಣಿಸಿಕೊಂಡಿದ್ದು ವಿವಾದ ಸೃಷ್ಟಿಸಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ