ಹೊಸ ದಿಗಂತ ವರದಿ, ಮೈಸೂರು:
ಟಿಪ್ಪು ನಮ್ಮ ಊರಿನವರೇ ಅಲ್ವಾ, ಅವರೇನು ಹೊರ ದೇಶದವರಲ್ಲ. ಹೀಗಿದ್ದರೂ ಅವರನ್ನು ದೇಶ ದ್ರೋಹಿ ಅಂತಾ ಬಿಂಬಿಸೋದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೈಸೂರು ಸಂಸ್ಥಾನವನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವುದಕ್ಕೆ ಕ್ಯಾಬಿನೆಟ್ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಒಡೆಯರ್ ಅವರ ಹೆಸರಿಡಲು ನಮ್ಮ ತಕರಾರು ಇಲ್ಲ. ಆದರೆ ಈ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕೆಂದು ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಹೆಸರು ಇಡುವುದು ಬಿಡುವುದು ಬೇರೆ ವಿಚಾರ. ಆದರೆ ಟಿಪ್ಪು ವಿಚಾರದಲ್ಲಿ ಕೆಲವರು ಅಭಿಪ್ರಾಯ ಹೇಳೋದು ಅಪರಾಧನಾ ಎಂದು ಪ್ರಶ್ನಿಸಿದರು.
ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮೈಸೂರು ಜಿಲ್ಲೆಯಲ್ಲಿ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಿಲ್ಲಾಡಳಿತದ ಜೊತೆಗೆ ಸಭೆ ಮಾಡುತ್ತೇನೆ ಎಂದು ಹೇಳಿದರು.
ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಗಂಭೀರವಾದ ರಾಷ್ಟ್ರೀಯ ಭದ್ರತಾ ವಿಚಾರ. ಆರೋಪಿಗಳಿಗೆ ಬೇರೆಯವರು ಲೆಟರ್ ಕೊಟ್ಟಿದ್ದರೆ ಮೈಸೂರು ಗತಿ ಏನಾಗುತ್ತಿತ್ತು? ಬೇರೆ ಧರ್ಮದವರು ಲೇಟರ್ ಕೊಟ್ಟಿದ್ದರೆ ಗತಿ ಏನಾಗುತ್ತಿತ್ತು? ಲೆಟರ್ ಕೊಟ್ಟಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಒಂದೊoದು ಬಾರಿ ಗಡಿಪಾರು ಆದವರು, ಕೊಲೆ ಆರೋಪಿಗಳು ನಮ್ಮ ಜೊತೆಯೆ ಫೋಟೋ ತೆಗೆಸಿ ಕೊಂಡಿರುತ್ತಾರೆ, ಅದನ್ನು ನಾವು ಗಮನಿಸುವುದಕ್ಕೆ ಆಗುತ್ತಾ ಎಂದರು.