ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಇಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಪೋಸ್ಟರ್ ಒಂದನ್ನು ಪ್ರದರ್ಶಿಸಿ, ನಮ್ಮ ಕ್ಷೇತ್ರದಲ್ಲಿ ರೈತರ ಆತ್ಮಹತ್ಯೆಯಾಗಿದ್ದು, ಆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ಕೋರಲು ಮುಂದಾದರು.
ಈ ವೇಳೆ ಗರಂ ಆದ ಸಭಾಧ್ಯಕ್ಷರಾದ ಯು.ಟಿ.ಖಾದರ್ ಸದನಕ್ಕೆ ಪೋಸ್ಟರ್ ತರಬಾರದು ಹಾಗೂ ಪ್ರದರ್ಶಿಸಬಾರದು, ಪ್ರಚಾರಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪೋಸ್ಟರ್ ಸದನಕ್ಕೆ ತರುವುದು ಸರಿಯಲ್ಲ, ಇದರಿಂದ ನಿಮಗೆ ಪ್ರಚಾರ ಸಿಕ್ಕರೂ ಮತ ಸಿಗುವುದಿಲ್ಲ. ಲಿಖಿತವಾಗಿ ನೋಟಿಸ್ ಕೊಟ್ಟರೆ ಚರ್ಚೆಗೆ ಅವಕಾಶ ಕೊಡಲಾಗುವುದು.ನೀವು ಶೂನ್ಯವೇಳೆಯನ್ನು ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದರು.
ಇತ್ತ ಬಿತ್ತಿಪತ್ರ ಪ್ರದರ್ಶಿಸಬಾರದು ಎಂಬ ಸ್ವೀಕರ್ ವಾದಕ್ಕೆ ಬಿಜೆಪಿ ಹಿರಿಯ ಸದಸ್ಯರಾದ ಸಿ.ಸಿ.ಪಾಟೀಲ್, ಅಶ್ವತ್ಥನಾರಾಯಣ ಅವರು ಆಕ್ಷೇಪಿಸಿ, ನೀವು ಶಾಸಕರಾಗಿದ್ದಾಗ ನೀವು ಪ್ರದರ್ಶಿಸಿಲ್ಲವೆ ಎಂದರು. ಆಗ ಸಭಾಧ್ಯಕ್ಷರು ಹಿಂದಿನ ಸಭಾಧ್ಯಕ್ಷರು ಕೂಡ ಇದೇ ರೀತಿಯ ಸೂಚನೆ ಕೊಟ್ಟಿದ್ದರು ಎಂದು ಹೇಳಿ ಸಂತಾಪ ಸೂಚನೆ ಕಲಾಪ ಕೈಗೆತ್ತಿಕೊಂಡರು.