ಹೊಸದಿಗಂತ ಶಿವಮೊಗ್ಗ;
ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 6140 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿ ನೀಡಿದ್ದು, ಈ ವರ್ಷ ಉತ್ತಮ ಮಳೆಯಾಗಿದ್ದು ನಿರೀಕ್ಷೆ ಮೀರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಎಲೆಕ್ಟ್ರಿಕಲ್ ವಿಭಾಗದ ಮುಖ್ಯ ಅಭಿಯಂತರ ಎಚ್.ಆರ್.ರಮೇಶ್ ತಿಳಿಸಿದರು.
ಲಿಂಗನಮಕ್ಕಿ ಜಲಾಶಯ 1811.40 ಅಡಿ ತಲುಪಿದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದಿಂದ ಜಲಾಶಯಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವರ್ಷ ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ಬರುವ ಲಿಂಗನಮಕ್ಕಿ, ಮಹಾತ್ಮಾ ಗಾಂದಿ ವಿದ್ಯುದಾಗಾರ, ಶರಾವತಿ ವಿದ್ಯುದಾಗಾರ ಹಾಗೂ ಗೇರುಸೊಪ್ಪ ವಿದ್ಯುದಾಗಾರಗಳಲ್ಲಿ 1469 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯದ ಗ್ರಿಡ್‌ಗೆ ನೀಡಲಾಗಿತ್ತು. ಶರಾವತಿ ನದಿ ನೀರಿನ ನಾಲ್ಕೂ ವಿದ್ಯುದಾಗಾರಗಳಲ್ಲಿ ಈ ಬಾರಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದರು.
ನಿಗಮದ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಮಾದೇಶ್ ಮಾತನಾಡಿ, ಲಿಂಗನಮಕ್ಕಿ ಜಲಾಶಯ 1819 ಅಡಿ ಇದ್ದು ನಿಗಮದ ಪರಿಭಾಷೆಯಲ್ಲಿ 1795 ಅಡಿ ತಲುಪಿದರೆ ಬೆಡ್ ಲೆವೆಲ್ ಆಗುತ್ತದೆ. ಇದೀಗ ಡ್ಯಾಂ ಲೆವೆಲ್ 1840.40 ತಲುಪಿದೆ. ಶೇ. 83ರಷ್ಟು ಡ್ಯಾಂ ಭರ್ತಿಯಾಗಿದೆ. 1815 ಅಡಿ ತಲುಪಿ ಒಳಹರಿವು ಹೆಚ್ಚಿದ್ದರೇ ನೀರನ್ನು ಗೇಟ್ ಮೂಲಕ ಹೊರ ಬಿಡಲಾಗುತ್ತದೆ ಎಂದು ಹೇಳಿದರು.
ಕೆಪಿಸಿ ಕಾರ್ಮಿಕ ವಿಭಾಗದ ಕೇಂದ್ರೀಯ ಸಮಿತಿ ಅಧ್ಯಕ್ಷ ವಿರೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ವಿದ್ಯುತ್, ಅತಿಹೆಚ್ಚು ಉತ್ಪಾದಿಸಿ ರಾಜ್ಯಕ್ಕೆ ನೀಡಲು ನಿಗಮದ ಅಧಿಕಾರಿ ನೌಕರ ವರ್ಗ ಬದ್ದರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ.ಎಸ್.ಟಿ. ಯೂನಿಯನ್ ಅಧ್ಯಕ್ಷ ಮಿರ್ಜಾಕುಮಾರ್, ಕಾರ್ಮಿಕ ಮುಖಂಡರಾದ ಕೇಶವೆ ಗೌಡ, ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.