ಹೊಸದಿಗಂತ ವರದಿ ಮಂಡ್ಯ:
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಪಕ್ಷದ ಜವಾಬ್ದಾರಿ. ಒಳ್ಳೆಯ ಕೆಲಸ ಮಾಡಿ ಪಕ್ಷವನ್ನು ಕಟ್ಟುವಂತೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವರಿಷ್ಠರು ಹೇಳಿದ್ದಾರೆ. ಪಕ್ಷವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿ.ಪಿ. ಉಮೇಶ್ ಅವರಿಂದ ಪಕ್ಷದ ಬಾವುಟ ಪಡೆದು ಅಧಿಕಾರ ಸ್ವೀಕರಿಸಿದ ಅವರು, ಯಾವುದೇ ಕಾರಣಕ್ಕೂ ಕಟ್ಟಕಡೆಯ ಕಾಯಕರ್ತರನಿಗೂ ಧಕ್ಕೆ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಹಕಾರ, ಪ್ರೀತಿ ಇರಲಿ ಎಂದು ಮನವಿ ಮಾಡಿದರು.
ದೇಶ ಮೊದಲು, ಪಕ್ಷ ಆಮೇಲೆ, ವ್ಯಕ್ತಿ ನಂತರ ಎಂಬುದೇ ಬಿಜೆಪಿಯ ಸಿದ್ಧಾಂತವಾಗಿದೆ. ವ್ಯಕ್ತಿಗೆ ಯಾವುದೇ ಪ್ರಾಧಾನ್ಯತೆ ಇಲ್ಲ. ಪಕ್ಷದ ಜವಾಬ್ದಾರಿಯನ್ನು ಯಾರಿಗಾದರೂ ಕೊಡಲಿ, ನಾವು-ನೀವು ಎಲ್ಲರೂ ಒಗ್ಗಟ್ಟಾಗಿ ದುಡಿದು ಪಕ್ಷವನ್ನು ಸದೃಢಗೊಳಿಸೋಣ ಎಂದರು.
ಲೋಕಸಭೆ ಗೆಲ್ಲಬೇಕು :
ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು, 100ಕ್ಕೆ 100ರಷ್ಟು ನಾವು ಗೆಲ್ಲಬೇಕು. ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷದ ಯಾರೊಬ್ಬರೂ ಸದಸ್ಯರಾಗಿ ಆಯ್ಕೆಯಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ವ್ಯಕ್ತಿಗೆ ಅವಕಾಶ ನೀಡಿ ಎಲ್ಲರೂ ಒಗ್ಗೂಡಿ ಗೆಲ್ಲಿಸೋಣ ಎಂದು ಕರೆ ನೀಡಿದರು.
ಬಣ, ಗುಂಪುಗಾರಿಕೆಗೆ ಅವಕಾಶ ಕೊಡಲ್ಲ :
ಪಕ್ಷದ ಜಿಲ್ಲಾ ಘಟಕದಲ್ಲಿ ಯಾವುದೇ ಬಣ, ಗುಂಪುಗಾರಿಕೆಗೆ ಅವಕಾಶ ಕೊಡದೆ, ಪ್ರತಿಯೊಬ್ಬರ ವಿಶ್ವಾಸ ಗಳಿಸಿ ಪಕ್ಷವನ್ನು ಕಟ್ಟುತ್ತೇನೆ. ಯಾವುದೇ ಬಣ, ಗುಂಪುಗಾರಿಕೆ ಮಾಡಬಾರದು. ನಮ್ಮದು ಒಂದೇ ಪಾರ್ಟಿ, ಅದು ಬಿಜೆಪಿ ಪಾರ್ಟಿ. ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಪಕ್ಷವನ್ನು ಸದೃಢಗೊಳಿಸುತ್ತೇನೆ ಎಂದರು.