Sunday, January 11, 2026

ಅಧಿಕಾರ ಹಂಚಿಕೆ ಕದನ: ಬೆಳಗಾವಿ ಅಧಿವೇಶನದಲ್ಲಿ ಸಿದ್ದು Vs ಡಿಕೆಶಿ ಬಣಗಳ ಸ್ಪಷ್ಟ ಇಬ್ಬಾಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಅಧಿಕಾರ ಹಂಚಿಕೆ ಸಮರವು ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರೋಚಕ ಘಟ್ಟ ತಲುಪಿದೆ.

ಹೈಕಮಾಂಡ್ ನಾಯಕರು ಈ ಹಿಂದೆ ಏರ್ಪಡಿಸಿದ್ದ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೂಲಕ ರಾಜ್ಯ ನಾಯಕತ್ವದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಬಿಂಬಿಸಲು ಪ್ರಯತ್ನಿಸಿದರೂ, ಬೆಳಗಾವಿಗೆ ಆಗಮಿಸಿದ ಕೂಡಲೇ ಬಣ ರಾಜಕೀಯ ಮತ್ತೆ ಭುಗಿಲೆದ್ದಿದೆ. ಪಕ್ಷದ ಇಬ್ಬರೂ ಪ್ರಮುಖ ನಾಯಕರು ತಮ್ಮ ತಮ್ಮ ಬೆಂಬಲಿಗರ ಬಲವನ್ನು ಪ್ರದರ್ಶಿಸಲು ಪ್ರತ್ಯೇಕ ಡಿನ್ನರ್ ಸಭೆಗಳನ್ನು ಆಯೋಜಿಸಿದ್ದು, ಕಾಂಗ್ರೆಸ್‌ನಲ್ಲಿನ ಸ್ಪಷ್ಟ ವಿಭಜನೆಯನ್ನು ಎತ್ತಿ ತೋರಿಸಿದೆ.

ಮೂಲಗಳ ಪ್ರಕಾರ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತರು ಮತ್ತು ಡಿನ್ನರ್ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಿಗೆ, ತಮ್ಮ ಬೆಂಬಲಕ್ಕೆ 100ಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂಬ ಭರವಸೆ ನೀಡಿದ್ದಾರೆ. ಸಚಿವ ಸ್ಥಾನಗಳ ಉಳಿಸಿಕೊಳ್ಳುವಿಕೆ ಮತ್ತು ತಮ್ಮ ರಾಜಕೀಯ ಭವಿಷ್ಯದ ಲೆಕ್ಕಾಚಾರದಲ್ಲಿ ಅನೇಕ ಸಚಿವರು ಹಾಗೂ ಶಾಸಕರು ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಡಿಕೆ ಶಿವಕುಮಾರ್ ಅವರು ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ, ದೆಹಲಿಯಲ್ಲಿ ರಾಜ್ಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್ ನಾಯಕರಿಗೂ ತಮ್ಮ ಬಲವನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂಬರುವ ಡಿಸೆಂಬರ್ 20 ಮತ್ತು 21 ರಂದು ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯಲ್ಲಿ, ಡಿ.ಕೆ. ಶಿವಕುಮಾರ್ ತಮ್ಮೊಂದಿಗೆ ಇರುವ ಶಾಸಕರ ಬಲದ ಸಂಖ್ಯೆಯನ್ನು ಪ್ರಸ್ತುತಪಡಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಅವರು 100ಕ್ಕೂ ಹೆಚ್ಚು ಶಾಸಕರ ಬೆಂಬಲದ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!