ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕ್ರೀಡಾಂಗಣದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಅಗ್ನಿಶಾಮಕ ದಳ ಸೂಚನೆ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಕಾಲ್ತುಳಿತ ಪ್ರಕರಣದ ತನಿಖೆ ಹಲವು ಹಂತದಲ್ಲಿ ನಡೆಯುತ್ತಿದೆ. ಇತ್ತ ಅಗ್ನಿಶಾಮಕ ದಳ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಸಾವಿರಾರು ಜನ ಸೇರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಗ್ನಿ ಸುರಕ್ಷತಾ ಸರ್ಟಿಫಿಕೇಟ್ ತೆಗೆದುಕೊಂಡಿಲ್ಲ ಅನ್ನೋದು ಪತ್ತೆಯಾಗಿದೆ. ಸುರಕ್ಷತಾ ನಿಯಮ ಪಾಲನೆಯಲ್ಲಿ ಕೆಎಸ್‌ಸಿಎ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಪತ್ತೆಯಾಗಿದೆ.
ಅಗ್ನಿ ಸುರಕ್ಷತೆಯಲ್ಲಿ ಲೋಪ ಎಸಗಿದ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ರಾಜ್ಯ ಅಗ್ನಿಶಾಮಕದಳ ಮಹಾ ನಿರ್ದೇಶಕರು ಬೆಸ್ಕಾಂಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಕೆಎಸ್‌ಸಿಎ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆ ಕುರಿತು ಉಲ್ಲೇಖಿಸಿದ್ದರು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಪತ್ರದಲ್ಲಿ ಸೂಚಿಸಿದ್ದರು.
ಅಗ್ನಿಶಾಮಕದಳ ಮಹಾ ನಿರ್ದೇಶಕರ ಸೂಚನೆಯಂತೆ ಬೆಸ್ಕಾಂ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬೇಟಿ ನೀಡಿದ್ದಾರೆ. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.