ಹೊಸದಿಗಂತ ಡಿಜಿಟಲ್ ಡೆಸ್ಕ್
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಎನ್ನಲಾದ ಪ್ರಭಾಕರ್ ಸೇಲ್ ಶುಕ್ರವಾರ ಮುಹುಲ್ ಏರಿಯಾದಲ್ಲಿರುವ ಚೆಂಬೂರ್ನಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಇದೀಗ ಸಾವಿನ ಸುತ್ತ ಅನುಮಾನ ಕಾಡುತ್ತಿದೆ.
ಭಾಕರ್ ಸೇಲ್ ಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಇದು ಸಹಜವಾದ ಸಾವಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಇತ್ತ ಪ್ರಭಾಕರ್ ಸೇಲ್ ನಿಧನದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಆದೇಶಿಸಿದ್ದಾರೆ.
ಪ್ರಭಾಕರ್ ಸೇಲ್ ಸಾವಿನ ತನಿಖೆ ಡಿಜಿಪಿ ನೇತೃತ್ವದ ತಂಡದಿಂದ ನಡೆಯಲಿದೆ. ಇನ್ನು ಪ್ರಭಾಕರ್ ಸೇಲ್ ಸಾವಿನ ಬಗ್ಗೆ ಕುಟುಂಬ ಯಾವುದೇ ರೀತಿಯ ಅನುಮಾನವನ್ನೂ ವ್ಯಕ್ತಪಡಿಸಿಲ್ಲ ಎಂದು ವಕೀಲರಾದ ತುಷಾರ್ ಖಂಡಾರೆ ತಿಳಿಸಿದ್ದಾರೆ.
ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರ್ಯನ್ ಖಾನ್ ಸಂಬಂಧಪಟ್ಟಂತೆ ಪ್ರಭಾಕರ್ ಅವರನ್ನೂ ಎನ್ಸಿಬಿ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದರು.
ಎನ್ಸಿಬಿ ಅಧಿಕಾರಿಗಳು ಸುಮಾರು 10 ಖಾಲಿ ಪೇಪರ್ಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಸುಮಾರು 25 ಕೋಟಿ ರೂಪಾಯಿ ವಸೂಲಿ ಮಾಡಿದ ಬಗ್ಗೆ ನಡೆದ ದೂರವಾಣಿ ಸಂಭಾಷಣೆಯನ್ನೂ ನಾನು ಕೇಳಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲ, ಕಿರಣ್ ಗೋಸಾವಿಗೆ ತಾನು ಬಾಡಿಗಾರ್ಡ್ ಆಗಿದ್ದೆ, ಆದರೆ ಅವರ ಬಳಿ ಕೆಲಸ ಮಾಡುತ್ತಿದ್ದ ಇನ್ನಿತರರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರಭಾಕರ್ ಹೇಳಿಕೊಂಡಿದ್ದರು.
ಕಿರಣ್ ಗೋಸಾವಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು. ಆದರೆ ನಂತರ ಇವರ ವಿರುದ್ಧವೇ ಹಣ ಪಡೆದ ಆರೋಪ ಕೇಳಿಬಂದಿತ್ತು. ಮುಂಬೈ ಐಷಾರಾಮಿ ಹಡಗಿನ ಮೇಲೆ ದಾಳಿಯಾಗುತ್ತಿದ್ದಂತೆ ಕಿರಣ್ ಗೋಸಾವಿ 50 ಲಕ್ಷ ರೂಪಾಯಿ ಪಡೆದಿದ್ದಾಗಿ ಇದೇ ಪ್ರಭಾಕರ್ ಸೇಲ್ ಆರೋಪ ಮಾಡಿದ್ದರು. ಹೀಗಾಗಿ ಎನ್ಸಿಬಿ ಪ್ರಭಾಕರ್ ಅವರನ್ನು ಒಂದು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿಕೊಂಡಿತ್ತು.