ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 15 ರಂದು ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು. ಮನವಿಯನ್ನು ಸಿಎಂ ಪುರಸ್ಕರಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ.
ಮಗಳ ಭೀಕರ ಹತ್ಯೆಯ ತನಿಖೆಯಲ್ಲಿ ಸ್ಥಳೀಯ ಪೋಲಿಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷ್ಯತೆ, ಸಾಕ್ಷ್ಯ ನಾಶ ಯತ್ನ, ಕೊಲೆಗಡುಕರೊಂದಿಗಿನ ಶಾಮೀಲುದಾರಿಕೆ, ಸಂತ್ರಸ್ತ ತಾಯಿಯಾದ ನನಗೆ ಬೆದರಿಕೆ ವಿಚಾರಗಳ ಬಗ್ಗೆ ಸಮಗ್ರ ತನಿಖೆ, ನ್ಯಾಯ ಮತ್ತು ರಕ್ಷಣೆಗಾಗಿ ಸಿಐಡಿಗೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಕೆ.ಆರ್.ಸೌಮ್ಯ ಕೋರಿದ್ದಾರೆ.
ಮೇ 15ರಂದು ಸಂಜೆ ಮನೆಯಲ್ಲೇ ಮಗಳ ಭೀಕರ ಹತ್ಯೆ ಮಾಡಲಾಗಿದೆ. ಹತ್ಯೆಯ ಮೊದಲ ದಿನದಿಂದಲೂ ಸುಬ್ರಮಣ್ಯಪುರ ಪೋಲೀಸ್ ಠಾಣೆಯ ತನಿಖಾಧಿಕಾರಿಗಳು ಮತ್ತು ಅವರ ತಂಡ ಸಂಶಯಾಸ್ಪದವಾಗಿ ವರ್ತಿಸುತ್ತಾ ನನ್ನ ಮನಸ್ಸಿಗೆ ಬಹು ಘಾತ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪದೇ ಪದೇ ಹೇಳಿದರೂ ಕೇಳಿಸಿಕೊಳ್ಳದ ತನಿಖಾ ತಂಡ ಮೊದಲ ಮೂರ್ನಾಲ್ಕು ದಿನವು ಇದನ್ನು ಆತ್ಮಹತ್ಯೆ ಎಂದೇ ಬಿಂಬಿಸುವ ಪ್ರಯತ್ನ ಮಾಡಿ, ಕೊಲೆಗಡುಕ ಮತ್ತು ಕೊಲೆಗಡುಕನಿಗೆ ಎಲ್ಲ ರೀತಿಯ ಸಹಾಯ ಮತ್ತು ಸಹಾಯ ಮಾಡಿ, ಕೊಲೆಯ ಸಂಗತಿಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಕೊಲೆಗಡುಕನ ತಂದೆ ತಾಯಿಯರನ್ನೂ ರಕ್ಷಿಸುವ ದುರುದ್ದೇಶದ ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.
ಆರೋಪಿ ಕಡೆಯವರು ಪೊಲೀಸರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದು, ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಪೋಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ಮಹಜರ್ ನಡೆಸಿದ್ದಾರೆ. ವಕೀಲರಿಗೆ ಯಾವುದೇ ಮಾಹಿತಿ ಒದಗಿಸದೇ, ಆಪಾದಿತನು ಹತ್ತೇ ದಿನಕ್ಕೆ ಜಾಮೀನು ಪಡೆದು ನಿಶ್ಚಿಂತನಾಗಿ ಓಡಾಡಿಕೊಂಡಿದ್ದಾನೆ. ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದ ನನಗೆ ಈಗ ಜೀವಭಯವೂ ಉಂಟಾಗಿದೆ. ನನ್ನ ವಯಸ್ಸಾದ ತಾಯಿ ಮತ್ತು ಮಗನ ಕುರಿತೂ ಆತಂಕವಾಗಿದೆ. ಹೀಗಾಗಿ ಪ್ರಬುದ್ಧ ಹತ್ಯೆಯನ್ನು ಸಿ.ಐ.ಡಿ.ಗೆ ವಹಿಸಿ ಅಪರಾಧಿ ಮತ್ತು ಅವನಿಗೆ ಬೆಂಬಲ ನೀಡಿದವರಿಗೆ ತಕ್ಕ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?
ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸದ ಬಾತ್ ರೂಂನಲ್ಲಿ ಮೇ 15ರ ಮಧ್ಯಾಹ್ನ ಬಾಲಕಿ ಪ್ರಬುದ್ಧ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಕುತ್ತಿಗೆ ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
Hope CID wil do best🙏🏼🙏🏼🙏🏼