ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರ ಮೇಲೆ ಗಾಢ ನಿದ್ರೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಗೆ ಅಪಾಯೆಯೊಂದು ಕಾಡಿದೆ .
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಚಂದ್ರಯಾನ- 3 ಯೋಜನೆ ತನ್ನ ಉದ್ದೇಶಿತ ಗುರಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿದ ನೌಕೆಯು, ಸಾಕಷ್ಟು ಪ್ರಯೋಗಗಳನ್ನು ನಡೆಸಿ ಕಾಯಂ ನಿದ್ದೆಗೆ ಜಾರಿದೆ.
ಜೊತೆಗೆ ಚಂದ್ರನ ಮೇಲೆ ಮಲಗಿರುವ ಈ ನೌಕೆ ಮತ್ತೆ ಭೂಮಿಗೆ ಮರಳಿ ಬರುವುದಿಲ್ಲ. ಚಂದ್ರನ ಅಂಗಳದಲ್ಲಿ ಇವು ಭಾರತದ ಪ್ರತಿನಿಧಿಗಳಂತೆ ಕಾಯಂ ಆಗಿ ಉಳಿದುಕೊಳ್ಳಲಿವೆ.
ಇದರ ಮದ್ಯೆ ಇದೀಗ ನಿದ್ರಾಸ್ಥಿತಿಯಲ್ಲಿಯೇ ಪ್ರಜ್ಞಾನ್ ಮತ್ತು ವಿಕ್ರಮನಿಗೆ ಹೊಸ ಬೆದರಿಕೆ ಎದುರಾಗಿದೆ.
ಅದೇನೆಂದರೆ ಸೂರ್ಯನ ಬೆಳಕಿನ ಶಕ್ತಿಯಿಂದ ಓಡಾಡುತ್ತಿದ್ದ ವಿಕ್ರಮ್ ಮತ್ತು ಪ್ರಜ್ಞಾನ್ ನಿಶ್ಚಲವಾಗಿ ಮಲಗಿರುವಾಗ, ಸಣ್ಣ ಉಲ್ಕೆಗಳು ಚಂದ್ರನ ನೆಲದ ಮೇಲೆ ‘ಬಾಂಬ್ ದಾಳಿ’ ನಡೆಸುವ ಅಪಾಯವಿದೆ.ಚಂದ್ರನ ಮೇಲೆ ಸಣ್ಣ ಪ್ರಮಾಣದ ಉಲ್ಕೆಗಳು ನಿರಂತರವಾಗಿ ಬೀಳುತ್ತಲೇ ಇರುವುದರಿಂದ ಲ್ಯಾಂಡರ್ ಮತ್ತು ರೋವರ್ ನೌಕೆಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.
ಚಂದ್ರನ ಮೇಲೆ ಈಗಾಗಲೇ ಸುದೀರ್ಘ ಸಮಯದಿಂದ ಇರುವ ಅಪೋಲೋ ಬಾಹ್ಯಾಕಾಶ ನೌಕೆ ಸೇರಿದಂತೆ ಈ ಹಿಂದಿನ ಚಂದ್ರಯಾನ ಯೋಜನೆಗಳು ಕೂಡ ಇಂತದ್ದೇ ಸಮಸ್ಯೆ ಎದುರಿಸಿತ್ತು. ಹೀಗಾಗಿ ಇದಕ್ಕೂ ಅಪಾಯದ ಭೀತಿ ಶುರುವಾಗಿದೆ.ಚಂದ್ರ ರಾತ್ರಿಯಲ್ಲಿ ತಾಪಮಾನ ವಿಪರೀತ ಕುಸಿದು ಕಡು ಚಳಿ ಉಂಟಾಗುವುದರ ಜತೆಗೆ, ಸೂಕ್ಷ್ಮ ಉಲ್ಕೆಗಳು ಅಪ್ಪಳಿಸುವುದರಿಂದ ಬಾಹ್ಯಾಕಾಶ ನೌಕೆಗಳಿಗೆ ಇನ್ನಷ್ಟು ಹಾನಿ ಉಂಟಾಗಬಹುದು ಎಂದು ಮಣಿಪಾಲ್ ಸೆಂಟರ್ ಆಫ್ ನ್ಯಾಚುರಲ್ ಸೈನ್ಸಸ್ನ ಪ್ರೊಫೆಸರ್ ಹಾಗೂ ನಿರ್ದೇಶಕ ಡಾ ಪಿ ಶ್ರೀಕುಮಾರ್ ಹೇಳಿದ್ದಾರೆ.
ಚಂದ್ರನಲ್ಲಿ ವಾತಾವರಣ ಇಲ್ಲದ ಕಾರಣ ಸೂರ್ಯನಿಂದ ನಿರಂತರವಾಗಿ ‘ಬಾಂಬ್’ ದಾಳಿಗಳು ಕೂಡ ನಡೆಯುತ್ತವೆ. ಇದು ಕೂಡ ನೌಕೆಗಳಿಗೆ ಹಾನಿ ಉಂಟುಮಾಡಬಹುದು. ಆದರೆ ಈ ಕುರಿತು ಹೆಚ್ಚಿನ ಡೇಟಾಗಳು ಇಲ್ಲದ ಕಾರಣ ಮುಂದೆ ಏನಾಗಲಿದೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ ಎಂದು ವಿವರಿಸಿದ್ದಾರೆ.