ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಸಂಸದ ಪ್ರಜ್ಚಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕಾಂಗ್ರೆಸ್ ಚುನಾವಣಾ ರ್ಯಾಲಿ ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಿದರು. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಿಯಾಂಕಾ ಗಾಂಧಿ, ಸಭೆಗೆ ತಡವಾಗಿ ಬಂದಿರುವುದಕ್ಕೆ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಯಿಸಿದ್ದಕ್ಕೆ ಕ್ಷಮೆ ಕೇಳಿದರು.
ಸತ್ಯಮೇವ ಜಯತೇ ಎಂಬ ಮಾತನ್ನು ಅಕ್ಷರಶಃ ಪಾಲಿಸುವ ದೇಶ ನಮ್ಮ ದೇಶ. ಮನೆಯಲ್ಲಿ, ತಾಯಿ ಮಕ್ಕಳಿಗೆ ಸತ್ಯವನ್ನು ಹೇಳಲು ಕೇಳುತ್ತಾರೆ. ಮಹಾತ್ಮ ಗಾಂಧೀಜಿಯವರೂ ಸತ್ಯದ ಮಾರ್ಗವನ್ನು ಅನುಸರಿಸಿದರು. ರಾಜಕೀಯವೂ ಸತ್ಯದ ಹಾದಿಯಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷ ಸತ್ಯ ರಾಜಕಾರಣದ ಹಾದಿ ಹಿಡಿದಿದೆ. ಆದರೆ ಕಳೆದ ಒಂದು ದಶಕದಲ್ಲಿ ರಾಜಕೀಯ ದಿಕ್ಕು ಬದಲಾಗಿದೆ. ಇಲ್ಲಿ ಸತ್ಯಕ್ಕೆ ಸ್ಥಾನವಿಲ್ಲ ಎಂದು ಹೇಳಿದರು.