ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯ ಅಂದರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಸಲ್ಲಿಸುವ ಜಾಮೀನು ಅರ್ಜಿಯನ್ನು 10 ದಿನಗಳಲ್ಲಿ ನಿರ್ಧರಿಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಸೂಚಿಸಿದೆ. ಇದರೊಂದಿಗೆ ಪ್ರಜ್ವಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕದಸ್ಯ ಪೀಠ ಇತ್ಯರ್ಥಪಡಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿದ್ದಾರೆ. ಇದೀಗ ಅರ್ಜಿ ಸಲ್ಲಿಸಿದ ಹತ್ತು ದಿನಗಳಲ್ಲಿ ನಿರ್ಧರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದರಿಂದ ಪ್ರಜ್ವಲ್ಗೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಯಾಕಂದ್ರೆ, ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೆ ಹೋಗುತ್ತಲೇ ಇತ್ತು. ಆದ್ರೆ, ಇದೀಗ ಹೈಕೋರ್ಟ್ 10 ದಿನದಲ್ಲೇ ನಿರ್ಧರಿಸುವಂತೆ ಹೇಳಿದ್ದರಿಂದ ಎಲ್ಲೋ ಒಂದು ಕಡೆ ಪ್ರಜ್ವಲ್ಗೆ ಜಾಮೀನು ಸಿಗುವ ಆಶಾಭಾವನೆ ಮೂಡಿದ್ದು, ಜಾಮೀನು ಸಿಗುತ್ತಾ ಇಲ್ವಾ ಎಂದು ಅರ್ಜಿ ಸಲ್ಲಿಸಿದ ಹತ್ತೇ ದಿನಗಳಲ್ಲಿ ತಿಳಿಯಲಿದೆ.