ದಿಗಂತ ವರದಿ ಮೈಸೂರು:
ವಿದೇಶಕ್ಕೆ ತೆರಳಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಇಲ್ಲಿನ ತನಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ . ಹಾಗಾಗಿ ತನಿಖೆ ನಡೆಸುತ್ತಿರುವ ಎಸ್ ಐಟಿಯವರೇ ಅವರನ್ನು ಪತ್ತೆ ಹಚ್ಚಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಯ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ವಿದೇಶಕ್ಕೆ ತೆರಳಿರುವ ಪ್ರಜ್ವಲ್ ರೇವಣ್ಣರನ್ನು ಅವರ ಕುಟುಂಬದವರು ಸೇರಿದಂತೆ ಎಲ್ಲರೂ ಸಂಪರ್ಕಿಸಲು ಪ್ರಯತ್ನ ನಡೆಸಿದರೂ, ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಹಾಗಾಗಿ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿಯವರು 196 ದೇಶಗಳಲ್ಲಿ ಬ್ಲೂ ಕಾರ್ನ ನೋಟೀಸ್ ಜಾರಿಗೊಳಿಸಿ, ಪ್ರಜ್ವಲ್ ರೇವಣ್ಣರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಅವರಿಗೆ ಸಿಕ್ಕಿದಾಗ ಮಾತ್ರ ಪ್ರಜ್ವಲ್ ರೇವಣ್ಣರ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೆನ್ ಡ್ರೈ ವ್ ತಯಾರಿಸಿದ್ದು, ಅಪ್ ಲೋಡ್ ಮಾಡಿದ್ದು ಚೆನ್ನೈ ಹಾಗೂ ಮಲೇಷಿಯಾ ದಲ್ಲಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಕರಣದ ವ್ಯಾಪಕ ತನಿಖೆಗಾಗಿ ಪ್ರಕರಣ ವನ್ನು ಸಿಬಿಐಗೆ ಕೊಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ.
ಆದರೆ ಮುಖ್ಯ ಮಂತ್ರಿಗಳು ಎಸ್ ಐಟಿ, ನಮ್ಮ ರಾಜ್ಯದ ಅಧಿಕಾರಿಗಳ ಮೇಲೆ ನಂಬಿಕೆಯಿದೆ. ಹಾಗಾಗಿ ಪ್ರಕರಣ ವನ್ನು ಸಿಬಿಐಗೆ ಕೊಡುವುದಿಲ್ಲ ಎಂದು ಹೇಳಿದ್ದಾರೆ.ಈ ಪ್ರಕರಣದಲ್ಲಿ ಪೆನ್ ಡ್ರೈವ್ ತಯಾರಿಸಿದ್ದು, ಹಂಚಿಸಿದ್ದು, ಹಂಚಿದ್ದು ಯಾರೂ ಎಂಬುದರ ಬಗ್ಗೆ ತನಿಖೆ ಯಾಗಬೇಕು.ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.