ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರ, ಆಗಸ್ಟ್ 2 ರಿಂದ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. ಜೈಲು ಅಧಿಕಾರಿಗಳು ಪ್ರಜ್ವಲ್‌ಗೆ CTP ಖೈದಿ ಸಂಖ್ಯೆ 15528 ಅನ್ನು ನಿಗದಿ ಮಾಡಿದ್ದಾರೆ.
ಇಂದಿನಿಂದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಾವಳಿಗೆ ಕಟ್ಟುನಿಟ್ಟಾಗಿ ಒಳಪಟ್ಟಿದ್ದಾರೆ. ಖೈದಿಗಳ ನಿಯಮಾನುಸಾರ ಅವರು ಈಗಿನಿಂದ ಬಿಳಿ ಬಟ್ಟೆ ಧರಿಸಬೇಕಾಗುತ್ತದೆ. ಜೈಲು ಸಿಬ್ಬಂದಿ ಇಂದು ಅವರಿಗೆ ಬಿಳಿ ಬಣ್ಣದ ದೈನಂದಿನ ವಸ್ತ್ರಗಳನ್ನು ವಿತರಿಸಲಿದ್ದಾರೆ.
ಇಷ್ಟು ದಿನ ವಿಚಾರಣಾಧೀನ ಬಂಧಿಯಾಗಿ ಜೈಲಿನಲ್ಲಿದ್ದ ಪ್ರಜ್ವಲ್, ನಿನ್ನೆಯಿಂದ ಅಪರಾಧಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸದಲ್ಲಿದ್ದಾರೆ.
ಜೀವಾವಧಿ ಶಿಕ್ಷೆ ನಿರೀಕ್ಷೆ ಇಲ್ಲದೆ, ತಮ್ಮ ಕುಟುಂಬ ಹಾಗೂ ರಾಜಕೀಯ ಹಿನ್ನೆಲೆಯಿಂದ ಕಡಿಮೆ ಶಿಕ್ಷೆ ಭಾವಿಸಿದ್ದ ಪ್ರಜ್ವಲ್‌ರಿಗೆ, ನ್ಯಾಯಾಧೀಶರು ನೀಡಿದ ತೀರ್ಪು ನಿದ್ದೆಗೆಡಿಸುವಂತಾಯಿತು.
ಪರಪ್ಪನ ಅಗ್ರಹಾರ ಜೈಲಿನ ನಿಯಮಾನುಸಾರ, ಪ್ರಜ್ವಲ್ ರೇವಣ್ಣ ಈಗ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ನೀಡಲಾದ ಕೆಲಸದ ಪ್ರಕಾರ ಪ್ರಾರಂಭದಲ್ಲಿ ರೂ.524 ಸಂಬಳ ನೀಡಲಾಗುವುದು. ನಂತರ ಅನುಭವದ ಮೇಲೆ ಅವರ ವರ್ಗವನ್ನೂ ನಿಗದಿಪಡಿಸಲಾಗುತ್ತದೆ.
ಜೈಲು ನಿಯಮಗಳಂತೆ, ಪ್ರತಿದಿನವೂ ಖೈದಿಗಳು 8 ಗಂಟೆಗಳ ಕಾಲ ಕೆಲಸ ಮಾಡುವುದು ಕಡ್ಡಾಯವಾಗಿದೆ. ಪ್ರಜ್ವಲ್ ರೇವಣ್ಣರನ್ನು ಸಜಾಬಂಧಿ ಖೈದಿಗಳ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದ್ದು, ಅವರಿಗೆ ವಿವಿಧ ಕೆಲಸಗಳ ಆಯ್ಕೆ ನೀಡಲಾಗುತ್ತದೆ .
ಮೊದಲ ವರ್ಷ ಅವರು ಕೌಶಲ್ಯ ರಹಿತ ವರ್ಗಕ್ಕೆ ಸೇರಿದ್ದು, ಇದಕ್ಕಾಗಿ ಪ್ರತಿ ತಿಂಗಳು ₹524 ರಷ್ಟು ವೇತನ ನಿಗದಿಯಾಗಿದೆ. ನಂತರ ಅವರು ಅನುಭವವನ್ನು ಪಡೆದುಕೊಂಡಂತೆ ಅರೆ-ಕೌಶಲ್ಯ ಹಾಗೂ ನುರಿತ ವರ್ಗದ ವೇತನ ವರ್ಗಗಳಿಗೆ ಬಡ್ತಿ ಪಡೆಯಬಹುದು.ಈ ಮೂಲಕ, ನ್ಯಾಯಾಲಯದ ತೀರ್ಪಿನ ಜೊತೆಗೆ, ಪ್ರಜ್ವಲ್ ರೇವಣ್ಣ ಅವರ ರಾಜಕೀಯದಿಂದ ಬದಲಾಗಿದ ಜೀವನ ಈಗ ಜೈಲಿನ ನಿಯಮ ಮತ್ತು ಶಿಸ್ತು ಪಾಲನೆಯೊಂದಿಗೇ ಮುಂದುವರಿಯಲಿದೆ.