ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 6 ದಿನಗಳ ಕಾಲ ಎಸ್‌ಐಟಿ ಪೊಲೀಸರ ಕಸ್ಟಡಿಗೆ ನೀಡಿ ಎಸಿಎಮ್ಎಮ್ ನ್ಯಾಯಾಲಯದ ನ್ಯಾಯಧೀಶ ಎನ್. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಎಸ್‌ಐಟಿ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಗಂಭೀರ ಆರೋಪಗಳನ್ನು ಹೊತ್ತಿರುವ ಅವರ ತನಿಖೆಗಾಗಿ ಎಸ್‌ಐಟಿ ತನ್ನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.
ಗುರುವಾರ ರಾತ್ರಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ತನಕ ಎಸ್‌ಐಟಿ ಕಚೇರಿಯಲ್ಲೇ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರು. ಬೆಳಗ್ಗೆ ಅವರ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಅವರಿಂದ ಅಗತ್ಯ ದಾಖಲೆಗಳಿಗೆ ಸಹಿ ಮಾಡಿಕೊಂಡರು. ಆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದರು. ಪ್ರಜ್ವಲ್ ರೇವಣ್ಣ ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ತಿಳಿಸಿದರು.
ಅಶೋಕ್ ನಾಯ್ಕ್ ವಾದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಪ್ರತಿವಾದ ಮಂಡಿಸಿದರು. ಪೊಲೀಸರು ತಮಗೆ ಇಷ್ಟ ಬಂದ ಹಾಗೆ ಪ್ರಕರಣಗಳನ್ನು ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಜ್ವಲ್ ವಿರುದ್ಧ ದಾಖಲಾಗಿರುವ ಕೇಸ್ ಅಡಿಯಲ್ಲಿ ಅವರಿಗೆ ಜಾಮೀನು ನೀಡಬಹುದು. ಜಾಮೀನು ಸಿಗುವ ಪ್ರಕರಣದಲ್ಲಿ ಜಾಮೀನುರಹಿತ ಕೇಸ್ ದಾಖಲಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ವಿನಾಕಾರಣ 15 ದಿನ ಕಸ್ಟಡಿಗೆ ಕೇಳುತ್ತಿದ್ದಾರೆ. ಒಂದು ದಿನ ಕಸ್ಟಡಿಗೆ ನೀಡಿದರೆ ಸಾಕು. ಏಪ್ರಿಲ್ 28ರಿಂದ ಮೇ 2ರವರೆಗೆ ಅತ್ಯಾಚಾರ ಆರೋಪ ಇರಲಿಲ್ಲ. ಸಂತ್ರಸ್ತೆಯ ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎಸ್‌ಐಟಿ ತನಿಖೆಗೆ ಪ್ರಜ್ವಲ್ ರೇವಣ್ಣ ಸಹಕಾರ ನೀಡಲಿದ್ದಾರೆ ಎಂಬುದಾಗಿ ತಿಳಿಸಿದರು.
ಇದಕ್ಕೆ ಅಶೋಕ್ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದರು.ಅತ್ಯಾಚಾರ ಆರೋಪಿಯು ಸಾಮಾನ್ಯ ವ್ಯಕ್ತಿಯಲ್ಲ, ಅವರೊಬ್ಬ ಸಂಸದ. ಆರೋಪಿಯು ಜೀವನಪೂರ್ತಿ ಜೈಲು ವಾಸ ಅನುಭವಿಸಬೇಕಾದ ಕೇಸ್ ಇದು ಎಂದರು.
ಆಗ ಅರುಣ್, ಆರೋಪಿಯು ಪೊಲೀಸರಿಗೆ ಬಂದು ಶರಣಾಗಿದ್ದಾರೆ. ಹಾಗಾಗಿ, 15 ದಿನ ಕಸ್ಟಡಿಗೆ ವಹಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಅಂತಿಮವಾಗಿ ಕೋರ್ಟ್ 6 ದಿನಗಳ ಕಾಲ ಎಸ್‌ಐಟಿ ಪೊಲೀಸರ ಕಸ್ಟಡಿಗೆ ನೀಡಿದೆ.