ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಐದು ವರ್ಷಗಳ ಹಿಂದೆ ಕೊಲೆಗೀಡಾಗಿದ್ದಾರೆ ಎನ್ನಲಾದ ಕೊಲ್ಲಂ ಇರವಿಪುರಂ ನಿವಾಸಿ ಪ್ರಮೀಳಾ (30) ಎಂಬಾಕೆಯ ಮೃತದೇಹಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ ಆರಂಭವಾಗಿದ್ದ ಶೋಧ ಮತ್ತೆ ಸ್ಥಗಿತಗೊಂಡಿದೆ.
ಮೃತದೇಹಕ್ಕೆ ಸಂಬಂಧಿಸಿ ಯಾವುದೇ ಕುರುಹುಗಳನ್ನು ಪತ್ತೆಹಚ್ಚಲು ಕ್ರೈಮ್ ಬ್ರಾಂಚ್ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಮೂಲಕ ಕೃತ್ಯ ಇನ್ನೂ ತನ್ನ ನಿಗೂಢತೆಯನ್ನು ಉಳಿಸಿಕೊಂಡಿದೆ.
2019 ಸೆ. 19ರಂದು ದಿಢೀರ್ ನಾಪತ್ತೆಯಾಗಿದ್ದ ಪ್ರಮೀಳಾರನ್ನು ಆಕೆಯ ಪತಿಯೇ ಹತ್ಯೆ ಮಾಡಿದ್ದಾನೆ ಎಂಬ ಆರೋಪವಿದೆ. ಪೊಲೀಸ್ ವಿಚಾರಣೆಯಲ್ಲಿಯೂ ಆತ ತಾನು ಕೊಲೆಗೈದು ಹೊಳೆಗೆ ಎಸೆದಿದ್ದೇನೆ ಎಂದಿದ್ದ. ಆದರೆ ಹೊಳೆಯಲ್ಲಾಗಲೀ ಇತರ ಕಡೆಗಳಲ್ಲಾಗಲಿ ಪ್ರಮೀಳಾ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ.
ಶವ ಶೋಧಕ್ಕಾಗಿ ಕೊಚ್ಚಿಯ ಎರಡು ವಿಶೇಷ ಶ್ವಾನದಳ ಕರೆಸಲಾಗಿತ್ತಾದರೂ ಫಲನೀಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.