Friday, November 21, 2025

ಬಿಹಾರದ ಮಹತ್ಮಾ ಗಾಂಧಿ ಆಶ್ರಮದಲ್ಲಿ ಪ್ರಶಾಂತ್​ ಕಿಶೋರ್​ ಮೌನ ಉಪವಾಸ

ಬಿಹಾರದ ಮಹತ್ಮಾ ಗಾಂಧಿ ಆಶ್ರಮದಲ್ಲಿ ಪ್ರಶಾಂತ್​ ಕಿಶೋರ್​ ಮೌನ ಉಪವಾಸ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಅವರ ಜನ್​ ಸುರಾಜ್​ ಪಕ್ಷ ಠೇವಣಿ ಕಳೆದುಕೊಂಡು ಸೋಲನ್ನು ಅನುಭವಿಸಿತ್ತು. ಈ ಸೋಲಿನ ಹೊಣೆ ಹೊತ್ತು, ಸರ್ಕಾರವನ್ನು ಬದಲಿಸಲು ವಿಫಲವಾಗಿದ್ದಕ್ಕಾಗಿ ಒಂದು ದಿನದ ಮಟ್ಟಿಗೆ ಮೌನ ವ್ರತ ನಡೆಸುವುದಾಗಿ ಘೋಷಿಸಿದ್ದರು.

ಅದರಂತೆ ಶತಮಾನದ ಇತಿಹಾಸ ಹೊಂದಿರುವ ಮಹಾತ್ಮ ಗಾಂಧಿ ನಿರ್ಮಾಣ ಮಾಡಿದ ಪಶ್ಚಿಮ ಚಂಪಾರಣ್​ ಜಿಲ್ಲೆಯಲ್ಲಿರುವ ಭಿತಿಹರ್ವ ಆಶ್ರಮಕ್ಕೆ ಆಗಮಿಸಿ, ಅವರು ಮೌನ ಉಪವಾಸ ನಡೆಸಿದ್ದಾರೆ ಎಂದು ಜನ್​ ಸುರಾಜ್​ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾತ್ಮ ಗಾಂಧಿ ಅವರ ಅನುಯಾಯಿಯಾಗಿರುವ ಕಿಶೋರ್​ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಗಾಂಧಿ ಜಯಂತಿಯಂದು ಜನ್​ ಸುರಾಜ್​ ಪಕ್ಷವನ್ನು ಸ್ಥಾಪಿಸಿದ್ದು, 3,500 ಕಿಲೋ ಮೀಟರ್​ ಪಾದಯಾತ್ರೆಯನ್ನು ನಡೆಸಿದ್ದರು.

ಪ್ರಶಾಂತ್​ ಕಿಶೋರ್​ ಜೊತೆಗೆ ರಾಜ್ಯ ಘಟಕದ ಮುಖ್ಯಸ್ಥ ಮನೋಜ್ ಭಾರ್ತಿ ಅವರಂತಹ ಪಕ್ಷದ ಸಹೋದ್ಯೋಗಿಗಳು ಮೌನ ಉಪವಾಸ ಪ್ರಾರಂಭಿಸುವ ಮೊದಲು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಈ ಮೌನ ವ್ರತದ ಕುರಿತು ಇತ್ತೀಚಿಗೆ ಹೇಳಿಕೆ ನೀಡಿದ್ದ ಪ್ರಶಾಂತ್​ ಕಿಶೋರ್​, ಕಳೆದ ಮೂರು ವರ್ಷಗಳಿಂದ ನಾನು ನೀವು ನೋಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಶ್ರಮಿಸಿದ್ದೇನೆ. ನನ್ನ ಎಲ್ಲಾ ಶಕ್ತಿಯನ್ನು ಹಾಕಿದ್ದೇನೆ. ಆದರೂ ಸೋಲಾಗಿದೆ. ನನ್ನ ಪ್ರಯತ್ನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಹಾರವನ್ನು ಉತ್ತಮ ರಾಜ್ಯವನ್ನಾಗಿ ಮಾಡುವ ನನ್ನ ಸಂಕಲ್ಪವನ್ನು ಮುಂದುವರೆಸುವೆ. ಜನರು ಯಾವ ಆಧಾರದ ಮೇಲೆ ಮತ ಚಲಾಯಿಸಬೇಕು. ವ್ಯವಸ್ಥೆಯನ್ನು ಏಕೆ ತರಬೇಕು ಎಂಬುದನ್ನು ವಿವರಿಸಲು ನಾನು ವಿಫಲನಾಗಿದ್ದೇನೆ. ಇದಕ್ಕೆ, ಪ್ರಾಯಶ್ಚಿತ್ತವಾಗಿ, ನವೆಂಬರ್ 20ರಂದು ಮೌನ ಉಪವಾಸ ವ್ರತ ಆಚರಿಸುವೆ ಎಂದು ತಿಳಿಸಿದ್ದರು.

error: Content is protected !!