ಪ್ರತಾಪ್ ಸಿಂಹರನ್ನು ಎದುರಿಸಲಾಗದ‌ ಕಾಂಗ್ರೆಸ್‌ನಿಂದ ವಾಮಮಾರ್ಗ: ಕೊಡಗು ಬಿಜೆಪಿ

ಹೊಸದಿಗಂತ ವರದಿ ಮಡಿಕೇರಿ:

ಸಂಸದ ಪ್ರತಾಪ್ ಸಿಂಹ ಅವರನ್ನು ಎದುರಿಸಲಾಗದ ಕಾಂಗ್ರೆಸ್, ವಾಮ ಮಾರ್ಗದ ಮೂಲಕ ಅವರ ಹೆಸರನ್ನು ಕೆಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ‌ ಟೀಕಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಪ್ರಮುಖರು, ಕರ್ನಾಟಕದ ಅತ್ಯಂತ ಜನಪ್ರಿಯ ಸಂಸತ್ ಸದಸ್ಯರಾಗಿರುವ ಪ್ರತಾಪ್ ಸಿಂಹ ಅವರನ್ನು ರಾಜಕೀಯವಾಗಿ ಎದುರಿಸಲಾಗದೆ ಸಂಸತ್’ನಲ್ಲಿ ನಡೆದ ದಾಳಿಯನ್ನು ಇವರ ತಲೆಗೆ ಕಟ್ಟುವ ಹುಚ್ಚು ಸಾಹಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಂಸದರ ಕಚೇರಿಯಿಂದ ಪಾಸ್ ಕೊಟ್ಟದ್ದನ್ನೇ ನೆಪವಾಗಿ ಇಟ್ಟುಕೊಂಡ ಕಾಂಗ್ರೆಸ್, ಸಂಸದರ ತೇಜೋವಧೆಗೆ ಪ್ರಯತ್ನಿರುವುದು ನಾಚಿಕೆ ಗೇಡಿನ ಸಂಗತಿ ಎಂದಿರುವ ಜಿಲ್ಲಾ ಬಿಜೆಪಿ ಪ್ರಮುಖರು, ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಎಟಿಎಂ ಆಗಿರುವ ಧೀರಜ್ ಸಾಹು ಅವರ ಬಳಿ ಭಾರೀ ಪ್ರಮಾಣದ ಹಣ ಪತ್ತೆಯಾಗಿರುವ ವಿಷಯವನ್ನು ದೇಶದ ಜನತೆಯಿಂದ ದೂರ ಸರಿಸಲು ಕಾಂಗ್ರೆಸ್ ಪ್ರತಾಪ್ ಸಿಂಹ ಅವರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಯಾವ ಸಂಸದ ಕೂಡಾ ತನ್ನ ಕ್ಷೇತ್ರದ ಮತದಾರ ತನ್ನ ಬಳಿ ಬಂದು ಸಂಸತ್’ನ ಕಾರ್ಯ ಕಲಾಪ ವೀಕ್ಷಿಸಲು ಅವಕಾಶ ಮಾಡಿ ಕೊಡಿ ಎಂದಾಗ ಅದಕ್ಕೆ ಸ್ಪಂದಿಸುವುದು ಸಾಮಾನ್ಯ. ಆದರೆ ಅದನ್ನು ದುರ್ಬಳಕೆ ಮಾಡಿದ ದೇಶ ದ್ರೋಹಿಗಳು ಸಂಸತ್ತಿನಲ್ಲಿ ನಡೆದು ಕೊಂಡ ರೀತಿ ಯಾರಿಂದಲೋ ಪ್ರಚೋದನೆಗೆ ಒಳಗಾಗಿ ಮಾಡಿದ ಕೃತ್ಯವೆಂದು ಅರ್ಥ ಮಾಡಿಕೊಳ್ಳಲು ಈ ದೇಶದ ಜನತೆಗೆ ಬಹಳ ಸಮಯ ಹಿಡಿಯಲಿಲ್ಲ. ಸ್ವತಃ ಆರೋಪಿಯೊಬ್ಬನ ತಂದೆ ತಪ್ಪು ಮಾಡಿದ ಮಗನನ್ನು ಗಲ್ಲಿಗೇರಿಸಿ ಎಂದರೂ ಕೂಡಾ ಕಾಂಗ್ರೆಸ್ ದೇಶದ ಭದ್ರತೆ ವಿಷಯವನ್ನು ರಾಜಕೀಯಗೊಳಿಸಿ ಸಂಸದರ ರಾಜೀನಾಮೆಗೆ ಒತ್ತಾಯ ಮಾಡಿರುವುದು ಇವರ ಕೀಳು ರಾಜಕೀಯವನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.

ಸಂಸತ್ ದಾಳಿಗೆ ನಿರುದ್ಯೋಗ, ಬೆಲೆ ಏರಿಕೆ ಕಾರಣ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಇಂತಹ ಘಟನೆಗಳಿಗೆ ಪ್ರಚೋದನೆ ನೀಡುತ್ತಿದ್ದು, ದೇಶದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್ ಚೆಲ್ಲಾಟ ವಾಡುತ್ತಿದೆ. ಪ್ರತಾಪ್ ಸಿಂಹ ಅವರನ್ನು ಗುರಿಯಾಗಿಟ್ಟು ಕೊಂಡು ಮಾತನಾಡುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಪ್ರಧಾನಿ ಮೋದಿಯವರ ಭಯ ಕನಸಿನಲ್ಲೂ ಕಾಡುತ್ತಿದ್ದು, ಕಾಂಗ್ರೆಸ್ ಪ್ರೇರಿತ ಟೂಲ್ ಕಿಟ್’ನ ಭಾಗವೇ ಈ ದಾಳಿ ಎಂದು ಬಿಜೆಪಿ ವ್ಯಾಖ್ಯಾನಿಸಿದೆ.

ಆದರೆ ಸಂಸದ ಪ್ರತಾಪ್ ಸಿಂಹರ ಮೇಲೆ, ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸದ ಬಗ್ಗೆ ಅವರು ಪ್ರತಿನಿಧಿಸುವ ಕೊಡಗು- ಮೈಸೂರು ಕ್ಷೇತ್ರದ ಜನತೆಗೆ ಸಂಪೂರ್ಣ ವಿಶ್ವಾಸವಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್’ನ ಈ ಷಡ್ಯಂತ್ರ ಈ ರಾಜ್ಯದಲ್ಲಿ ನಡೆಯುದಿಲ್ಲವೆಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!