ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (praveen nettaru) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸುವ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ತಿರಸ್ಕರಿಸಿದೆ.
ತಮ್ಮ ಮೇಲೆ ದಾಳಿ ನಡೆಯುವ ಭೀತಿಯಿಂದ ರಿಟ್ ಅರ್ಜಿ ಸಲ್ಲಿಸುವ ಮೂಲಕ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕುಟುಂಬದ ಸದಸ್ಯರು, ವಕೀಲರೊಂದಿಗೆ ಭೇಟಿಗೆ ಸಮಸ್ಯೆಯ ಕಾರಣ ನೀಡಿ ರಿಟ್ ಸಲ್ಲಿಸಲಾಗಿತ್ತು.
ಮೊಹಮ್ಮದ್ ಜಬೀರ್ ತಪ್ಪೊಪ್ಪಿಗೆ ಸಾಕ್ಷಿಯಾಗಲು ಸಿದ್ಧನಿದ್ದ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ 15 ಆರೋಪಿಗಳನ್ನು ವಿವಿಧ ಜೈಲುಗಳಿಗೆ ಖೈದಿಗಳನ್ನು ವರ್ಗಾಯಿಸಲು ಎನ್ಐಎ ಪತ್ರ ಬರೆದಿತ್ತು.
ಆರೋಪಿಗಳನ್ನು ಬೆಂಗಳೂರು ಜೈಲಿಗೆ ವರ್ಗಾಯಿಸಲು ಹೈಕೋರ್ಟ್ ನಕಾರವೆತ್ತಿದೆ. ಜೈಲುಗಳಲ್ಲಿ ಖೈದಿಗಳಿಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.
ಕುಟುಂಬದ ಸದಸ್ಯರು, ವಕೀಲರೊಂದಿಗೆ ಕಾನೂನಿಗೆ ಅನುಗುಣವಾಗಿ ಸಂವಹನಕ್ಕೆ ಅವಕಾಶ ಮತ್ತು ಸಂಭಾಷಣೆ ವೇಳೆ ಹೆಡ್ ಫೋನ್ ಒದಗಿಸಲು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.