ಹೊಸದಿಗಂತ ಮಂಗಳೂರು:
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ತಲೆಮರೆಸಿಕೊಂಡ ಆರೋಪಿಗಳು ಸೇರಿದಂತೆ ನಾಲ್ಕು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೆಚ್ಚುವರಿ ಆರೋಪ ಪಟ್ಟಿ ದಾಖಲಿಸಿದೆ.
ನಾಲ್ವರ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿದರೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
2022ರ ಜುಲೈ 26ರಂದು ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿಕೊಲೆ ಮಾಡಲಾಗಿತ್ತು. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿತ್ತು.
ಎನ್‌ಐಎ ದಾಖಲಿಸಿದ ಎರಡನೇ ಪೂರಕ ಆರೋಪ ಪಟ್ಟಿಯಲ್ಲಿ ಅಬ್ದುಲ್ ನಾಸಿರ್, ನೌಶಾದ್,
ಅಬ್ದುಲ್ ರಹಮಾನ್ ಮತ್ತು ಅತೀಕ್ ಅಹ್ಮದ್ ವಿರುದ್ಧ ಐಪಿಸಿ ಮತ್ತು ಯುಎ (ಪಿ) ಕಾಯ್ದೆ
1967ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 27 ಮಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸಿದಂತಾಗಿದೆ. ಆರೋಪಿಗಳಾದ ಅಬ್ದುಲ್ ನಾಸಿರ್, ನೌಶಾದ್ ಮತ್ತು ಅಬ್ದುಲ್ ರಹಮಾನ್ ಪರಾರಿಯಾದವರು ಎಂದು ಗುರುತಿಸಲಾಗಿದೆ.
ಎನ್‌ಐಎ ತನಿಖೆಯ ಪ್ರಕಾರ, ಈ ಮೂವರು ಮೈಸೂರು ಮತ್ತು ತಮಿಳುನಾಡಿನ ಕರ್ನಾಟಕ ಗಡಿಭಾಗ ಚಾಮರಾಜನಗರ ಜಿಲ್ಲೆಗಳ ಮೂರು ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದರು. ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ರಹಮಾನ್ ಕೂಡ ಬೆಂಗಳೂರಿನಲ್ಲಿ ಆರೋಪಿ ತುಫೈಲ್‌ಗೆ ಆಶ್ರಯ
ನೀಡಿದ್ದರು.
ಪ್ರವೀಣ್ ನೆಟ್ಟಾರು ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ, ಆರೋಪಿ ಅತೀಕ್ ಮತ್ತು ಮೃತ
ಖಲಂದರ್ ಅವರು ಈ ಪ್ರಕರಣದಲ್ಲಿ ಪಿತೂರಿ ನಡೆಸಿದ ಮುಸ್ತಾಫ ಪೈಚಾರ್‌ಗೆ 2022-23ರಲ್ಲಿ ಚೆನ್ನೈನಲ್ಲಿ ಆಶ್ರಯ ನೀಡಿದ್ದರು. ಬಳಿಕ ಆರೋಪಿ ಅಬ್ದುಲ್ ರಹಮಾನ್ ವಿದೇಶಕ್ಕೆ ಪಲಾಯನ ಮಾಡಿದ್ದನು. 2024ರಲ್ಲಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡುವಲ್ಲಿ ಆರೋಪಿ ರಿಯಾಜ್ ಮಾರ್ಗದರ್ಶನ ಮಾಡಿರುವುದನ್ನು ಎನ್‌ಐಎ ತನಿಖೆಯಲ್ಲಿ ಕಂಡುಕೊಂಡಿತ್ತು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರು ನಡೆಸುತ್ತಿರುವಂತೆಯೇ ರಾಜ್ಯ ಸರ್ಕಾರ ತನಿಖೆಯನ್ನು ಎನ್‌ಐಎಗೆ ವಹಿಸಿತ್ತು.