ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿರುವ ನಿಷೇಧಿತ ಪಿಎಫ್ಐ (PFI) ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಮಂಗಳವಾರ ಎನ್ಐಎ (NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ ಏಕಕಾಲಕ್ಕೆ ದಕ್ಷಿಣ ಕನ್ನಡ ಹಾಗೂ ಕೊಡಗಿನ 6 ಕಡೆಗಳಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ನಿಷೇಧಿತ ಪಿಎಫ್ಐ ಸಂಘಟನೆಗೆ ಸೇರಿದ ಕಾರ್ಯಕರ್ತರ ಮನೆಗಳಿಗೆ ತೆರಳಿ ಎಲೆಕ್ಟ್ರಾನಿಕ್ ಡಿವೈಸ್ಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಲಾಗಿದೆ.
ಈಗಾಗಲೇ ಹಲವು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ದ. ಕ. ಜಿಲ್ಲೆಯ ಹಲವೆಡೆ ಎನ್‌ಐಎ ದಾಳಿ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ.
ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್ , ಮಸೂದ್ ಅಗ್ನಾಡಿ ಸೇರಿದಂತೆ ಐದು ಮಂದಿ ಪ್ರಮುಖ ಆರೋಪಿಗಳಿಗಾಗಿ ಎನ್‌ಐಎ ಬೆಳ್ಳಾರೆ, ಸುಳ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಶೋಧ ನಡೆಸಿದೆ.
ಎನ್ಐಎ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಚಿತ ಪಡಿಸಿರುವ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ನಿಷೇಧಿತ ಸಂಘಟನೆಯಾದ ಪಿಎಫ್ಐನಲ್ಲಿ ಭಾಗಿಯಾಗಿದ್ದ ಸೋಮವಾರಪೇಟೆಯ ಕೆಲವು ಕಾರ್ಯಕರ್ತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರ ಎನ್ಐಎಗೆ ವಹಿಸಿತ್ತು. ಅದರಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈಗಾಗಲೇ ಸಾಕಷ್ಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಹಲವು ಬಾರಿ ದಾಳಿಗಳನ್ನು ನಡೆಸಿ ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು.