Monday, November 10, 2025

ಅಧಿಕಾರಕ್ಕಾಗಿ ‘ಗುರು-ಶಿಷ್ಯರ’ ಗುದ್ದಾಟ: ರಾಜ್ಯ ರಾಜಕಾರಣದಲ್ಲಿ ಹೊಸ ಸುಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಆಡಳಿತಾತ್ಮಕ ಸಮನ್ವಯದ ಮಾತುಗಳಿದ್ದರೂ, ಆಂತರಿಕ ರಾಜಕೀಯ ಗುದ್ದಾಟ ಮತ್ತು ಅಧಿಕಾರದ ರೇಸ್ ತೆರೆಮರೆಯಲ್ಲಿ ಸದ್ದು ಮಾಡುತ್ತಲೇ ಇದೆ. ಈ ರಾಜಕೀಯ ಜಿದ್ದಾಜಿದ್ದಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಇತ್ತೀಚಿನ ಟ್ವೀಟ್ ಮತ್ತಷ್ಟು ತುಪ್ಪ ಸುರಿದಿದೆ.

ಅಶೋಕ್ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅದರ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಬದಲು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಂಬಿಸಲು ‘ಹೊಸ ರಾಜಕೀಯ ನಾಟಕ’ವನ್ನು ಆಡಿಸುತ್ತಿದ್ದಾರೆ.

ಪ್ರಿಯಾಂಕ್ ಖರ್ಗೆ ‘ಆರ್‌ಎಸ್‌ಎಸ್ ವಿರೋಧಿ’ ನಡೆ: ಸಿಎಂ ಹುದ್ದೆಗೇರುವ ಯತ್ನ?

ಆರ್. ಅಶೋಕ್ ಅವರ ಟ್ವೀಟ್‌ನ ಮುಖ್ಯಾಂಶಗಳು ಹೀಗಿವೆ: ಸಚಿವ ಪ್ರಿಯಾಂಕ್ ಖರ್ಗೆ ಅವರು ಪದೇ ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರೋಧಿ ಪತ್ರಗಳನ್ನು ಬರೆಯುವುದು ಮತ್ತು ಸಂಘದ ಬಗ್ಗೆ ನಿಂದನಾತ್ಮಕ ಹೇಳಿಕೆಗಳನ್ನು ನೀಡುವುದು ಕೇವಲ ರಾಜಕೀಯ ನಡೆ ಅಲ್ಲ. ಇದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಓವರ್‌ಟೇಕ್ ಮಾಡಿ ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರುವ ಪ್ರಯತ್ನದ ಭಾಗವಾಗಿದೆ.

ಡಿಕೆಶಿ ‘ಧಾರ್ಮಿಕ’ ನಡೆಗಳು ಹೈಕಮಾಂಡ್‌ಗೆ ಮುಜುಗರ?
ಈ ‘ನಾಟಕ’ಕ್ಕೆ ಪೂರಕವಾಗಿ ಅಶೋಕ್ ಅವರು ಡಿಕೆಶಿ ಅವರ ಕೆಲವು ಇತ್ತೀಚಿನ ನಡೆಗಳನ್ನು ಉಲ್ಲೇಖಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್‌ ಸಂಘ ಗೀತೆ ಹಾಡುವುದು, ಇಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಕುಂಭ ಮೇಳಕ್ಕೆ ಭೇಟಿ ನೀಡುವುದು ಮತ್ತು ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸುವಂತಹ ಕಾರ್ಯಕ್ರಮಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ಉಂಟು ಮಾಡುತ್ತಿವೆ.

ಇದೇ ನಡೆಗಳನ್ನು ನೆಪವಾಗಿಟ್ಟುಕೊಂಡು, ಡಿಕೆಶಿ ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಬದ್ಧತೆ ಇಲ್ಲ ಎಂಬ ಹಣೆಪಟ್ಟಿ ಕಟ್ಟಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದರ ಜೊತೆಗೆ, ಪ್ರಿಯಾಂಕ್ ಖರ್ಗೆ ಅವರನ್ನು ‘ಕಟ್ಟರ್ ಆರ್‌ಎಸ್‌ಎಸ್ ವಿರೋಧಿ’ ಎಂದು ಬಿಂಬಿಸುವ ಮೂಲಕ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯನ್ನು ಸಿದ್ದರಾಮಯ್ಯನವರು ರೂಪಿಸಿದಂತೆ ಕಾಣುತ್ತದೆ ಎಂಬುದು ಆರ್. ಅಶೋಕ್ ಅವರ ನೇರ ಮತ್ತು ಸ್ಫೋಟಕ ಆರೋಪವಾಗಿದೆ.

error: Content is protected !!