January19, 2026
Monday, January 19, 2026
spot_img

ಭಾರತ-ಚೀನಾ ಗಡಿಯಲ್ಲಿ ಮತ್ತೊಂದು ಸಂಘರ್ಷದ ಮುನ್ಸೂಚನೆ? ಅರುಣಾಚಲವೇ ಡ್ರ್ಯಾಗನ್ ರಾಷ್ಟ್ರದ ಮುಂದಿನ ಗುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸುದೀರ್ಘ ಸಂಘರ್ಷಕ್ಕೆ ಸೈನಿಕರ ವಾಪಸಾತಿ ಮೂಲಕ ತಾತ್ಕಾಲಿಕ ವಿರಾಮ ಬಿದ್ದಿರಬಹುದು. ಆದರೆ, ನೆರೆಯ ಚೀನಾ ಈಗ ಅರುಣಾಚಲ ಪ್ರದೇಶದ ಗಡಿಯಲ್ಲಿ ಹೊಸ ಸಂಚು ರೂಪಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ (ಪೆಂಟಾಗನ್) ಇತ್ತೀಚಿನ ವರದಿ ಎಚ್ಚರಿಸಿದೆ.

ಚೀನಾವು ತೈವಾನ್ ಅನ್ನು ಎಷ್ಟು ಪ್ರಮುಖವೆಂದು ಭಾವಿಸುತ್ತದೆಯೋ, ಅರುಣಾಚಲ ಪ್ರದೇಶವನ್ನೂ ತನ್ನ ‘ಕೋರ್ ಇಂಟರೆಸ್ಟ್‌’ ಎಂದು ಪರಿಗಣಿಸಿದೆ. ಅರುಣಾಚಲವನ್ನು ತನ್ನದಾಗಿಸಿಕೊಳ್ಳುವುದು ಚೀನಾದ ದೀರ್ಘಕಾಲದ ಕಾರ್ಯತಂತ್ರದ ಭಾಗವಾಗಿದೆ.

2049ರ ವೇಳೆಗೆ ಚೀನಾವನ್ನು ಜಗತ್ತಿನ ಅಗ್ರಗಣ್ಯ ಶಕ್ತಿಯನ್ನಾಗಿ ಮಾಡುವ ಗುರಿಯನ್ನು ಅಧ್ಯಕ್ಷ ಷಿ ಜಿನ್‌ಪಿಂಗ್ ಹೊಂದಿದ್ದಾರೆ. ಈ “ಗ್ರೇಟ್ ರಿಜುವಿನೇಷನ್” ಯೋಜನೆಯಡಿಯಲ್ಲಿ ತೈವಾನ್, ದಕ್ಷಿಣ ಚೀನಾ ಸಮುದ್ರ ಮತ್ತು ಭಾರತದ ಅರುಣಾಚಲ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ಹವಣಿಸುತ್ತಿದೆ.

ವಿಶ್ವದರ್ಜೆಯ ಸೇನೆಯನ್ನು ನಿರ್ಮಿಸಿ, ಯಾವುದೇ ಕ್ಷಣದಲ್ಲಿ “ಯುದ್ಧ ಮಾಡಿ ಗೆಲ್ಲುವ” ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವೆಂದು ಅಮೆರಿಕದ ಕಾಂಗ್ರೆಸ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಡಾಖ್‌ನ ಎಲ್‌ಎಸಿ ಬಳಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಒಪ್ಪಂದವಾಗಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಅರುಣಾಚಲದ ಗಡಿಯಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಆದರೆ, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಮತ್ತು ಅದು ಯಾವಾಗಲೂ ಭಾರತದ್ದೇ ಆಗಿರುತ್ತದೆ ಎಂದು ಭಾರತ ಸರ್ಕಾರ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Must Read