ಏರೋ ಇಂಡಿಯಾ ಶೋ 2023 ಗೆ ಸಿದ್ಧತೆ: ಜ.30ರಿಂದ ಯಲಹಂಕ ವಲಯದಲ್ಲಿ ಮಾಂಸ ಮಾರಾಟ ನಿಷೇಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 13ರಿಂದ ಏರೋ ಇಂಡಿಯಾ 2023ಕ್ಕೆ ಪಾಲಿಕೆ ಎಲ್ಲ ರೀತಿಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಶುಕ್ರವಾರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ , ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ರವರೆಗೆ ಏರೋ ಇಂಡಿಯಾ ಏರ್‌ ಶೋ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದರು.

ಏರ್ ಶೋ ವೇಳೆ ಸ್ವಚ್ಛತೆ, ಆಗಮಿಸುವ ನಾಗರಿಕರಿಗೆ ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಬಿಬಿಎಂಪಿ ವತಿಯಿಂದ ಕಲ್ಪಿಸಲಾಗುತ್ತಿದೆ. ಈ ವೇಳೆ, ಯಲಹಂಕ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳು
ಏರೋ ಇಂಡಿಯಾ 2023 ಫೆಬ್ರವರಿ 13ರಂದು ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಲು ಸಕಲ ಸಿದ್ಧತೆಗಳ ಆರಂಭಿಸಿದೆ. ಸಿದ್ಧತೆಯ ಭಾಗವಾಗಿ ಬಿಬಿಎಂಪಿಯು ನೀರಿನ ಟ್ಯಾಂಕರ್‌ಗಳು, ತಾತ್ಕಾಲಿಕ ಶೌಚಾಲಯಗಳು, ಆಟೋ ಟಿಪ್ಪರ್ ಕಾಂಪ್ಯಾಕ್ಟರ್‌ಗಳು, ಕಸದ ತೊಟ್ಟಿಗಳು ಮತ್ತು ಸೈನ್‌ ಬೋರ್ಡ್‌ಗಳ ಸ್ಥಾಪನೆಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ. ಟೆಂಡರ್‌ಗಳನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.

ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾಕ್ಕಾಗಿ 1.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ, ತಾತ್ಕಾಲಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು, ಸಾರ್ವಜನಿಕ ಪಾರ್ಕಿಂಗ್ ಮತ್ತು ಮುಂಗಡ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಏರೋ ಇಂಡಿಯಾ ನಮ್ಮ ಹೆಮ್ಮೆಯಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಾಂಸಾಹಾರ ತಯಾರಿ -ಮಾರಾಟಕ್ಕೆ ನಿಷೇಧ
ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕ ವಲಯ‌ ವ್ಯಾಪ್ತಿಯಲ್ಲಿ ಕೆಲ ದಿನಗಳವರೆಗೆ ಮಾಂಸ‌ ಮಾರಾಟ ನಿಷೇಧಿಸಿ‌ ಬೃಹತ್‌ ಬೆಂಗಳೂರು ಮಹಾನಗರ‌ ಪಾಲಿಕೆ ಆದೇಶ ಹೊರಡಿಸಿದೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ಅದೇ ರೀತಿ ಡಾಬಾ ಹಾಗೂ ಹೋಟೆಲ್​ಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ನಿಷೇಧಿಸಲಾಗಿದೆ. ಪಾಲಿಕೆಯ ಆದೇಶ ಉಲ್ಲಂಘನೆಯಾದರೆ, ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ ನಿಯಮ 1937ರ ರೂಲ್ 91ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಯಲಹಂಕ ವಲಯದ ಜಂಟಿ ಆಯುಕ್ತೆ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!