ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-2 ಡ್ರಾ ಸಾಧಿಸಿದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಈಗ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದ್ದಾರೆ. ಅವರು ಸ್ವದೇಶದಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ನಿರ್ಧಾರವನ್ನು ಅವರು ಮುಂದಿನ ಟೆಸ್ಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಟೆಸ್ಟ್ ಪಂದ್ಯಗಳಿಗೆ ಈ ಟೂರ್ನಿ ಸಹಾಯಕವಾಗಲಿದೆ ಎಂದು ಭಾವಿಸಲಾಗಿದೆ.
ದೇಶೀಯ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಿರುವ ಗಿಲ್ ಅವರೊಂದಿಗೆ ಹಲವು ಯುವ ಆಟಗಾರರು ತಂಡದಲ್ಲಿ ಆಯ್ಕೆಯಾಗಿದ್ದಾರೆ. ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಅನ್ಶುಲ್ ಕಾಂಬೋಜ್ ಸೇರಿದಂತೆ ಹಲವಾರು ಹೊಸಬರಿಗೆ ಅವಕಾಶ ಸಿಕ್ಕಿದೆ. ಅಂಕಿತ್ ಕುಮಾರ್ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಿಲ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಲ್ಲಿ ಅವರು 754 ರನ್ ಗಳಿಸಿ ಸರಣಿ ಶ್ರೇಷ್ಠ ಆಟಗಾರ ಎಂಬ ಗೌರವ ಗಳಿಸಿದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ 261 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್ ಗಳಿಸಿ ಅಭಿಮಾನಿಗಳ ಮನಸ್ಸು ಗೆದ್ದರು.
ಅಗಸ್ಟ್ 28ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡ ಪೂರ್ವ ವಲಯ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯಾ ಕಪ್‌ಗಾಗಿ ಗಿಲ್ ತಂಡವನ್ನು ಬಿಟ್ಟುಕೊಡುವ ಸಾಧ್ಯತೆಯಿದೆ. ಅವರು ಏಷ್ಯಾ ಕಪ್ ಬಳಿಕ, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ಭಾಗವಹಿಸಲಿದ್ದಾರೆ.
ದುಲೀಪ್ ಟ್ರೋಫಿಗೆ ಘೋಷಿಸಲಾದ ಉತ್ತರ ವಲಯದ ತಂಡದಲ್ಲಿ ಶ್ರೇಷ್ಠ ಆಟಗಾರರು ಸ್ಥಾನ ಪಡೆದಿದ್ದು, ಯುವ ಪ್ರತಿಭೆಗಳಿಗೆ ಇದು ದೊಡ್ಡ ವೇದಿಕೆಯಾಗಲಿದೆ.