ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇನ್ನೆರೆಡು ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಬೆಳಕು ನಾಡಿನೆಲ್ಲೆಡೆ ಚೆಲ್ಲಲಿದೆ. ಎಲ್ಲಡೆ ಈಗಾಗಲೇ ಸಿದ್ಧತೆ ಶುರುವಾಗಿದ್ದು, ರಾಮನೂರು ಅಯೋಧ್ಯೆಯಲ್ಲಿಯೂ ಬೆಳಕಿನ ಹಬ್ಬಕ್ಕೆ ಬಿರುಸಿನ ತಯಾರಿ ನಡೆಯುತ್ತಿದೆ.
ರಾಮ ಜನ್ಮಭೂಮಿ ಅಯೋಧ್ಯೆ ರಾಮಮಂದಿರಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅಕ್ಟೋಬರ್ 19 ರಂದು ಸರಿ ಸುಮಾರು 26.11ಲಕ್ಷ ಮಣ್ಣಿನ ಹಣತೆಗಳಿಂದ ದೀಪ ಬೆಳಗಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆ ಬರೆಯಲು ಯೋಗಿ ಸರ್ಕಾರ ಸಜ್ಜಾಗಿದೆ.
ಅಲ್ಲದೇ ಅಕ್ಟೋಬರ್ 19 ರಂದು 2,100 ಭಕ್ತರಿಂದ ನಡೆಸಲ್ಪಡುವ ಭವ್ಯ ಮಹಾ ಆರತಿಯು ನಡೆಯಲಿದ್ದು, ಈ ಬಾರಿಯ ದೀಪಾವಳಿ ಹಬ್ಬಕ್ಕೆ ಅಯೋಧ್ಯೆಯಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯೆತೆ ಇದೆ ಹೇಳಲಾಗುತ್ತಿದೆ.
ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸೇರಿದಂತೆ ಸುಮಾರು 33,000 ಸ್ವಯಂಸೇವಕರು ಬೆಳಕಿನ ಹಬ್ಬವನ್ನು ಚಂದಗಾಣಿಸಲು ಕೈ ಜೋಡಿಸಿದ್ದು, ರಾಮ್ ಕಿ ಪೈಡಿ ಘಾಟ್ ಸೇರಿದಂತೆ ಒಟ್ಟು ಇಲ್ಲಿನ 56 ಘಾಟ್‌ಗಳಲ್ಲಿ ದೀಪಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಪ್ರಮುಖ ಘಾಟ್ ಗಳಾದ 8, 9, 10 ಮತ್ತು 11 ಪ್ರದೇಶಗಳಲ್ಲಿ ಸುಮಾರು 7 ರಿಂದ 8 ಲಕ್ಷ ದೀಪಗಳನ್ನು ಇಟ್ಟಾಗಿದ್ದು, ಈ ಮೂಲಕ ಅಯೋಧ್ಯೆಯಲ್ಲಿ ನಡೆದ ಮೊದಲ ದೀಪಾವಳಿ ದೀಪೋತ್ಸವ ಗಿನ್ನೆಸ್ ದಾಖಲೆಯನ್ನು ಮೀರಿ, ಹೊಸ ಗಿನ್ನೆಸ್ ವಿಶ್ವ ದಾಖಲೆ ಬರೆಯಲು ಸಿದ್ದವಾಗಿದೆ.
ಆಧುನಿಕತೆ ಭರಾಟೆ ಹಾಗೂ ಪ್ಲಾಸ್ಟಿಕ್ ಹಾವಳಿಯಿಂದ ಹಿಂದೆ ಸರಿದಿದ್ದ ಮಣ್ಣಿನ ದೀಪಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದ್ದು, ಮಣ್ಣಿನ ದೀಪ ತಯಾರಿಸುವವರಿಗೆ ನೆರವಾಗುವ ದೃಷ್ಟಿಯಿಂದ ಸ್ಥಳೀಯ ಕುಶಲಕರ್ಮಿಗಳಿಂದ ದೀಪಗಳನ್ನು ಖರೀದಿಸುವ ಮೂಲಕ ಅವರಿಗೆ ಅವಕಾಶ ನೀಡಲಾಗಿದೆ. ಇದರಿಂದ ಮಣ್ಣಿನ ದೀಪ ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಕುಂಬಾರರು, ಕುಶಲಕರ್ಮಿಗಳಿಗೆ ಬೆಂಬಲ ಸಿಕ್ಕಿದಂತಾಗಿದೆ .
ಈಗಾಗಲೇ ಜೈಸಿಂಗ್‌ಪುರ, ಪುರಾ ಬಜಾರ್ ಮತ್ತು ಗೋಸೈಗಂಜ್ ಸೇರಿದಂತೆ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಸುಮಾರು 40 ಕುಂಬಾರ ಕುಟುಂಬಗಳು ಸುಮಾರು 16 ಲಕ್ಷ ದೀಪಗಳನ್ನು ತಯಾರಿಸಿ ಕೊಟ್ಟಿವೆ. ಇದರೊಂದಿಗೆ 10 ಲಕ್ಷ ದೀಪಗಳನ್ನು ಉತ್ತರ ಪ್ರದೇಶದ ವಿವಿಧ ಕೈಗಾರಿಕಾ ಘಟಕಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಗ್ರಾಮೀಣ ಮಹಿಳೆಯರು ಸಿದ್ದಗೊಳಿಸಲಿದ್ದಾರೆ.
56 ಘಾಟ್‌ಗಳಲ್ಲಿ ಹಚ್ಚುವ ದೀಪಗಳು ನಿರಂತರವಾಗಿ ಉರಿಯುವಂತೆ ನೋಡಿಕೊಳ್ಳಲು 55 ಲಕ್ಷ ಹತ್ತಿ ಬತ್ತಿಗಳು ಮತ್ತು 73,000 ಲೀಟರ್ ಎಣ್ಣೆಯನ್ನು ಬಳಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ವರ್ಷ ರಾಮ್ ಕಿ ಪೈಡಿ ಘಾಟ್‌ನಲ್ಲಿ 16 ಲಕ್ಷ ದೀಪಗಳನ್ನು ಹಚ್ಚಲಾಗುತ್ತಿದ್ದು, ವಿಸ್ತೃತ ರಾಮ್ ಕಿ ಪೈಡಿಯಲ್ಲಿ 4.25 ಲಕ್ಷ ದೀಪಗಳು, ಚೌಧರಿ ಚರಣ್ ಸಿಂಗ್ ಘಾಟ್‌ನಲ್ಲಿ 4.75 ಲಕ್ಷ ದೀಪಗಳು, ಭಜನ್ ಸಂಧ್ಯಾ ಘಾಟ್‌ನಲ್ಲಿ 5.25 ಲಕ್ಷ ದೀಪಗಳು, ಲಕ್ಷ್ಮಣ್ ಕಿಲಾ ಘಾಟ್ ಮತ್ತು ಪಕ್ಕದ ಘಾಟ್‌ಗಳಲ್ಲಿ 1.25 ಲಕ್ಷ ದೀಪಗಳನ್ನು ಹಚ್ಚುವ ಯೋಜನೆಯನ್ನು ರೂಪಿಸಲಾಗಿದೆ.
ಇನ್ನು ಅಯೋಧ್ಯೆಯಲ್ಲಿ ಅಕ್ಟೋಬರ್ 20 ರವರೆಗೆ ಈ ದೀಪೋತ್ಸವದ ಮೆರಗು ನಡೆಯಲಿದ್ದು, ಈ ವರ್ಷ ಪ್ರಮುಖ ಆಕರ್ಷಣೆಗಳಲ್ಲಿ 3ಡಿ ಹೊಲೊಗ್ರಾಫಿಕ್ ಸಂಗೀತ ಲೇಸರ್ ಪ್ರದರ್ಶನ ಮತ್ತು 1,100 ‘ಮೇಕ್ ಇನ್ ಇಂಡಿಯಾ’ ಡ್ರೋನ್‌ಗಳನ್ನು ಒಳಗೊಂಡ ಡ್ರೋನ್ ಶೋ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರ ನಿಶ್ಚಲ್ ಬರೋಟ್ ನೇತೃತ್ವದ 150ಕ್ಕೂ ಜನರ ತಂಡ ಈಗಾಗಲೇ ನಾನಾ ಘಾಟ್‌ಗಳಲ್ಲಿ ಡ್ರೋನ್‌ಗಳನ್ನು ಬಳಸಿಕೊಂಡು ದಿಯಾಗಳನ್ನು ಎಣಿಸಲು ಪ್ರಾರಂಭಿಸಿದ್ದು, ನಿಶ್ಚಲ್ ಬರೂಲ್ ಅವರ ಪ್ರಕಾರ, ದೀಪಗಳ ನಿಖರ ಸಂಖ್ಯೆಯನ್ನು ಪಡೆಯಲು ಡ್ರೋನ್‌ಗಳ ಸಹಾಯ, ಹೈಟೆಕ್ ಸಾಫ್ಟ್‌ವೇರ್ ಬಳಕೆ ಹಾಗೂ ಡಿಜಿಟಲ್ ಆಡಿಟಿಂಗ್ ವ್ಯವಸ್ಥೆ ಹೀಗೆ ಮೂರು ತಂತ್ರಜ್ಞಾನಾಧಾರಿತ ವಿಧಾನಗಳನ್ನು ಬಳಸಲಾಗುತ್ತದೆ.