ಜೂನ್ ಅಂತ್ಯದವರೆಗೆ ಬರ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಹಿಂಗಾರು ಹಾಗೂ ಮುಂಗಾರು ಮಳೆ ಕೊರತೆಯಾಗಿ ಬರಗಾಲ ಪರಿಸ್ಥಿತಿ ಉದ್ಭವಿಸಿದೆ. ಜೂನ್ ಅಂತ್ಯದವರೆಗೆ ಬರ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕುಡಿಯುವ ನೀರು, ಬರ ನಿರ್ವಹಣೆ, ಕೃಷಿ, ಮೇವು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ(ಮಾ.5) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಬರಗಾಲದಿಂದ 48 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಮಾರ್ಚ್, ಏಪ್ರಿಲ್ ಹಾಗೂ‌ ಮೇ ತಿಂಗಳುಗಳಲ್ಲಿ ಪರಿಸ್ಥಿತಿ ಗಂಭೀರ ವಾಗಲಿದೆ.ಪೂರ್ವ ಮುಂಗಾರು ಮಳೆ ಕೆಲವೆಡೆ ನಿರೀಕ್ಷಿಸಲಾಗಿದೆ.ಆದಾಗ್ಯೂ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸಿಇಓ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಯೋಜನೆ ರೂಪಿಸಬೇಕು.ಮಾಧ್ಯಮಗಳಲ್ಲಿ ಪ್ರಕಟವಾಗುವ ಜನರ‌ ಸಮಸ್ಯೆಗಳ ಕುರಿತ ವರದಿಗಳನ್ನು ಪರಿಶೀಲಿಸಿ, ಅವುಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದರು.

ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು. ಟ್ಯಾಂಕರ್, ಖಾಸಗಿ ಕೊಳವೆಬಾವಿ ಸೇರಿದಂತೆ ಯಾವುದೇ ಜಲಮೂಲಗಳಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆಗೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದರು. .

ಬರಗಾಲ ಸಂದರ್ಭದಲ್ಲಿ ನರೇಗಾ ಉದ್ಯೋಗ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.ನರೇಗಾ ಉದ್ಯೋಗ ದಿನಗಳನ್ನು ಹೆಚ್ಚಿಸುವುದರಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕುಡಿಯುವ ನೀರು ಸಮಸ್ಯೆ ಕಂಡುಬಂದಾಗ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ‌ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಆರಂಭಿಸಬೇಕು.ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ರಜೆ ಮೇಲೆ ತೆರಳದೇ ಜನರ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು.ತಾಲ್ಲೂಕುಮಟ್ಟದ ಟಾಸ್ಕ್ ಫೋರ್ಸ್ ಗಳು ನಿಯಮಿತವಾಗಿ ಸಭೆ ನಡೆಸುವ ಮೂಲಕ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಧರಿಸಬೇಕು ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 855 ಕೋಟಿ ರೂಪಾಯಿ ಅನುದಾನವಿದೆ. ಹೆಚ್ಚುವರಿಯಾಗಿ ಪ್ರತಿ ಜಿಲ್ಲೆಗೆ ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು.

ವಿದ್ಯುಚ್ಛಕ್ತಿ ತೊಂದರೆಯಾಗಬಾರದು.‌ಹೊಸ ಕೊಳವೆಬಾವಿಗಳಿಗೆ ಯಾವುದೇ ನೆಪ ಹೇಳದೇ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಕೆಪಿಟಿಎಸಿಎಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಗತ್ಯ ಕಂಡುಬಂದರೆ ಖಾಸಗಿ ಕೊಳವೆಬಾವಿಗಳು ಹಾಗೂ ಟ್ಯಾಂಕರ್ ಗಳ ಮಾಲೀಕರ ಜತೆ ಮುಂಚಿವಾಗಿಯೇ ಒಪ್ಪಂದ ಮಾಡಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ಜೂನ್ ಅಂತ್ಯದವರೆಗೆ ನೀರು ಕೊರತೆಯಾಗದಂತೆ ಎಚ್ಚರಿಕೆ ವಹಿಸಬಹುದು. ಇದರಲ್ಲಿ ನಿರ್ಲಕ್ಯ ತೋರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ನೀತಿಸಂಹಿತೆ ಜಾರಿಯಾಗಲಿರುವುದರಿಂದ ಚುನಾವಣಾ ಕೆಲಸದ ಜತೆಗೆ ಬರ ನಿರ್ವಹಣೆಯನ್ನು ನಿರ್ಲಕ್ಷಿಸಬಾರದು. ಬರನಿರ್ವಹಣೆಗೆ ನೀತಿಸಂಹಿತೆಯು ಅಡ್ಡಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!