ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಎಲ್ಲಾ ಸದಸ್ಯರ ಅನುಕೂಲಕ್ಕಾಗಿ ನವೀಕರಿಸಿದ EPFO 3.0 ಪ್ಲ್ಯಾಟ್‌ಫಾರ್ಮ್ ಪರಿಚಯಿಸಲು ತಯಾರಾಗಿದೆ. ಇದರ ವಿಶೇಷತೆಯೆಂದರೆ, ಚಂದಾದಾರರು ತಮ್ಮ ಪಿಎಫ್ ಹಣವನ್ನು ನೇರವಾಗಿ ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಇದು ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುವ ಹಾಗೆಯೇ ಕೆಲಸ ಮಾಡುತ್ತೆ.
EPFO ಚಂದಾದಾರರು ಈ ಸೇವೆ ಉಪಯೋಗಿಸಲು ತಮ್ಮ ಯುಎಎನ್ (UAN) ನಂಬರ್ ಅನ್ನು ಸಕ್ರಿಯಗೊಳಿಸಬೇಕು ಮತ್ತು ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿರಬೇಕು. ಇದರ ಕೊನೆಯ ದಿನಾಂಕ ಜೂನ್ 30 ಆಗಿರಲಿದೆ. ವರದಿಗಳ ಪ್ರಕಾರ, ಡ್ರಾ ಮಿತಿ 1 ಲಕ್ಷ ಅಥವಾ ಸಂಗ್ರಹಿತ ಮೊತ್ತದ ಶೇಕಡಾ 50 ಇರಬಹುದು ಎಂದು ಅಂದಾಜಿಸಲಾಗಿದೆ.
ಈ ಹೊಸ ವ್ಯವಸ್ಥೆಯಲ್ಲಿ, ಹಣ ಹಿಂಪಡೆಯುವಿಕೆ, ಡೇಟಾ ತಿದ್ದುಪಡಿ ಹಾಗೂ ಸ್ವಯಂ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿರಲಿದೆ. OTP ಆಧಾರಿತ ಪರಿಶೀಲನೆ ಮೂಲಕ ಖಾತೆ ನವೀಕರಣ ಸಾಧ್ಯವಾಗುತ್ತದೆ.
EPFO 3.0 ಕೇಂದ್ರ ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಟಲ್ ಪಿಂಚಣಿ ಯೋಜನೆ, ಜೀವನ ಬಿಮಾ ಯೋಜನೆ ಮತ್ತು ಶ್ರಮಿಕ್ ಜನ್‌ಧನ್ ಯೋಜನೆ ಈ ವ್ಯವಸ್ಥೆಯ ಭಾಗವಾಗಲಿವೆ. ಈ ಮೂಲಕ ಚಂದಾದಾರರ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲವಾದರೂ, ಈ ಹೊಸ ವ್ಯವಸ್ಥೆ ಮುಂದಿನ ವಾರಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.