ಹೊಸ ದಿಗಂತ ವರದಿ, ನಾಗಮಂಗಲ :
ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದು ಹಾಲು ಜೇನು ಬೆರೆತಂತಾಗಿದೆ. ರಾಜ್ಯದಲ್ಲಿ ಮೋದಿ ಹವಾ ಇರೋದ್ರಿಂದ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲು ಎಲ್ಲ ತಯಾರಿ ನಡೆಸುತ್ತಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಕ್ಕು ದೆಸೆಯಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕರಿಲ್ಲ. ನಾಯಕತ್ವಕ್ಕಾಗಿ ಕಿತ್ತಾಡಿಕೊಳ್ಳುತ್ತಿರುವ ಆ ಪಕ್ಷಕ್ಕೆ ಒಂದು ಸಿದ್ದಾಂತವಿಲ್ಲ ಎಂದು ಜರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ ಕಾಂಗ್ರೆಸ್ಗೆ ಕೇವಲ ಒಂದು ಸ್ಥಾನ ಬಿಟ್ಟುಕೊಡಲಾಗಿತ್ತು. ಮುಂಬರುವ ಚುನಾವಣೆಯಲ್ಲಿ ಅದನ್ನೂ ಸಹ ಬಿಟ್ಟುಕೊಡುವುದಿಲ್ಲ. ರಾಜ್ಯದಲ್ಲಿ 28 ಸ್ಥಾನಗಳ ಜೊತೆಗೆ ದೇಶದಲ್ಲಿ ನಿರೀಕ್ಷೆಗೂ ಮೀರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಗೆಲುವಿಗೆ ಬಹಳ ವ್ಯವಸ್ಥಿತವಾಗಿ ಸಿದ್ದತೆಗಳು ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಳೆದ ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ. ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರೂ ಸಹ ಕೇಂದ್ರ ಗೃಹ ಸಚಿವ ಅಮಿತ್ಷಾ ಅವರೊಂದಿಗೆ ಮಾತುಕತೆ ನಡೆಸಿ ಬಂದಿದ್ದಾರೆ ಎಂದರು.
ಹಿಂದೂ ಧರ್ಮವನ್ನು ಹೀಯಾಳಿಸುವ ಕಾಂಗ್ರೆಸ್ ಪಕ್ಷದ ನಾಯಕರು ಶ್ರೀರಾಮನ ಜನನ ಪ್ರಮಾಣ ಪತ್ರ ಕೇಳುವುದು, ಅಯೋಧ್ಯೆಯಲ್ಲಿರುವ ಶ್ರೀರಾಮನನ್ನು ವಿಗ್ರಹವನ್ನು ಒಂದು ಬೊಂಬೆಗೆ ಹೋಲಿಸುವ ಮೂಲಕ ಹಿರಣ್ಯ ಕಶ್ಯಪನಂತೆ ಮಾತನಾಡುತ್ತಿದ್ದಾರೆ. ಕಾಮಾಲೆ ಕಣ್ಣಿನ ಈ ನಾಯಕರಿಗೆ ಎಂದು ಬುದ್ದಿ ಬರುತ್ತದೋ ಗೊತ್ತಿಲ್ಲ ಎಂದು ಕಿಡಿಕಾರಿದರು