ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಉತ್ತರ ಕನ್ನಡದ ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿ ಐಎನ್‌ಎಸ್ ವಾಗ್ಶೀರ್ ಸಬ್‌ಮೆರಿನ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ದೇಶದ ರಾಷ್ಟ್ರಪತಿಗಳಲ್ಲಿ ಸಬ್‌ಮೆರಿನ್‌ನಲ್ಲಿ ಪ್ರಯಾಣ ನಡೆಸಿದ ಎರಡನೇ ವ್ಯಕ್ತಿಯಾಗಿ ಅವರು ದಾಖಲೆ ಬರೆದಿದ್ದಾರೆ.
ಕಾರವಾರದ ಕದಂಬ ನೌಕಾನೆಲೆ, ಏಷ್ಯಾದ ಅತಿದೊಡ್ಡ ನೌಕಾನೆಲೆಗಳಲ್ಲಿ ಒಂದಾಗಿದ್ದು, ಯುದ್ಧ ಹಡಗುಗಳು, ಸಬ್‌ಮೆರಿನ್‌ಗಳು ಮತ್ತು ರಿಪೇರಿ ಯಾರ್ಡ್‌ಗಳ ನಿಲ್ದಾಣವಾಗಿದೆ. ಫೇಸ್-2 ಕಾಮಗಾರಿ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ನೌಕಾ ನಿಲ್ದಾಣದಲ್ಲಿ ನವೀಕೃತ ಸೌಲಭ್ಯಗಳು ಪೂರ್ಣಗೊಂಡಿವೆ.
ರಾಷ್ಟ್ರಪತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರವಾರಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಿಯಲ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಚೀಫ್ ಆಫ್ ನೇವಲ್ ಸ್ಟಾಫ್, ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮತ್ತು ಇತರ ಹಿರಿಯ ನೌಕಾಪಡೆ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ರಾಷ್ಟ್ರಪತಿ ಮುರ್ಮು ಸಬ್‌ಮೆರಿನ್‌ನಲ್ಲಿ ಒಂದು ಗಂಟೆಗಿಂತ ಹೆಚ್ಚು ಕಾಲ ಪ್ರಯಾಣ ನಡೆಸಿದರು. ಈ ಭೇಟಿ ಮೂಲಕ ದೇಶೀಯ ನೌಕಾಪಡೆಯ ಸಾಮರ್ಥ್ಯ ಮತ್ತು ನೌಕಾ ತಂತ್ರಜ್ಞಾನ ಪ್ರಗತಿಯನ್ನು ರಾಷ್ಟ್ರಪತಿಗೆ ಪರಿಚಯಿಸಲಾಯಿತು.

