ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ವಿಕಸಿತ ಭಾರತದ ಸಂಕಲ್ಪ ಮತ್ತು ಕಳೆದ ದಶಕದ ಸಾಧನೆಗಳ ಮೆಲುಕು ಹಾಕಿದರು.
ತಮ್ಮ ಭಾಷಣದ ಆರಂಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ಸ್ಮರಿಸಿದ ರಾಷ್ಟ್ರಪತಿಗಳು, “ಸಂವಿಧಾನವು ಜಾತಿ-ಮತಗಳ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಸಾಮಾಜಿಕ ನ್ಯಾಯ ಎಂಬುದು ಬರಿ ಮಾತಾಗುಳಿಯದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವುದೇ ಸರ್ಕಾರದ ಮೂಲ ಉದ್ದೇಶ,” ಎಂದು ಪ್ರತಿಪಾದಿಸಿದರು.
ಕಳೆದ ಹತ್ತು ವರ್ಷಗಳ ಆಡಳಿತದ ಪ್ರಗತಿಯನ್ನು ಅಂಕಿಅಂಶಗಳ ಸಮೇತ ವಿವರಿಸಿದ ಅವರು, ಸರ್ಕಾರದ ಜನಪರ ಯೋಜನೆಗಳಿಂದಾಗಿ 25 ಕೋಟಿ ಜನರು ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ ಎಂಬ ಮಹತ್ವದ ಮಾಹಿತಿ ಹಂಚಿಕೊಂಡರು. ಇದು ದೇಶದ ಆರ್ಥಿಕ ಸಬಲೀಕರಣದ ವೇಗಕ್ಕೆ ಸಾಕ್ಷಿಯಾಗಿದೆ ಎಂದರು.
ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿದೆ. ‘ಲಖ್ಪತಿ ದೀದಿ’ ಯೋಜನೆ ಮತ್ತು ಮಹಿಳಾ ಮೀಸಲಾತಿ ಜಾರಿಯಂತಹ ದಿಟ್ಟ ಕ್ರಮಗಳು ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನವನ್ನು ಆಮೂಲಾಗ್ರವಾಗಿ ಬದಲಿಸುತ್ತಿವೆ ಎಂದು ಅವರು ಶ್ಲಾಘಿಸಿದರು.
ಬಡವರ ಸಬಲೀಕರಣ ಮತ್ತು ಸಮಾನತೆಯ ಹಾದಿಯಲ್ಲಿ ಭಾರತವು ಇಂದು ಹಿಂದೆಂದಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ರಾಷ್ಟ್ರಪತಿಗಳು ಭರವಸೆ ವ್ಯಕ್ತಪಡಿಸಿದರು.



