ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ.3) ರಾಜ್ಯಕ್ಕೆ ಆಗಮಿಸುತ್ತಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಂದಿಬೆಟ್ಟ ಮತ್ತು ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.
ದೆಹಲಿಯಿಂದ ಐಎಎಫ್ಎಂಐ-17 ವಿಶೇಷ ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಲ್ಲಿಂದ ಮಧ್ಯಾಹ್ನ 3.55ಕ್ಕೆ ಹೆಲಿಕಾಪ್ಟರ್ ಮೂಲಕ ಮುದ್ದೇನಹಳ್ಳಿ ಗ್ರಾಮಕ್ಕೆ ಆಗಮಿಸಲಿದ್ದಾರೆ.
ಮುದ್ದೇನಹಳ್ಳಿ ಬಳಿಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ 2ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುರ್ಮು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರೊ.ಅಜಯ್ ಕೆ.ಸೂದ್, ಸಂಗೀತ ಮತ್ತು ಕಲೆ ವಿಭಾಗದಲ್ಲಿ ಡಾ.ಆರ್.ಕೆ.ಪದ್ಮನಾಭ, ಕ್ರೀಡೆ ಮತ್ತು ದೇಹದಾರ್ಢ್ಯತೆ ವಿಭಾಗದಲ್ಲಿ ಪುಲ್ಲೇಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಡಾ.ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಪ್ರೊ.ವಿಜಯ್ ಶಂಕರ್ ಶುಕ್ಲಾ, ಸಮಾಜಸೇವೆ ವಿಭಾಗದಲ್ಲಿ ತುಳಸಿಗೌಡ ಅವರಿಗೆ ಗೌರವ ಡಾಕ್ಟರೇಟ್ ಹಾಗೂ 17 ವಿದ್ಯಾರ್ಥಿಗಳಿಗೆ ಮುರ್ಮು ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.
ರಾಷ್ಟ್ರಪತಿ ಆಗಮನ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಜುಲೈ 2ರ ಬೆಳಗ್ಗೆ 6 ಗಂಟೆಯಿಂದ ಜುಲೈ 3ರ ಸಂಜೆ 6 ಗಂಟೆಯ ವರೆಗೆ ನಂದಿಬೆಟ್ಟ ಮತ್ತು ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.