ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ದೆಹಲಿ ಸೇವಾ ಮಸೂದೆ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ ಮತ್ತು ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ. ಇದೀಗ ಮಸೂದೆ ಹೊಸ ಕಾನೂನುಗಳಾಗಿ ಮಾರ್ಪಟ್ಟಿವೆ.
ದೆಹಲಿ ಸೇವಾ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ಬಳಿಕ ಆಪ್‌ಗೆ ಅತಿದೊಡ್ಡ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ ಬೆಂಬಲ ಇಲ್ಲದ ಹಿನ್ನೆಲೆ ರಾಜ್ಯಸಭೆಯಲ್ಲಿ ಇದನ್ನು ತಡೆಯಲು ಆಪ್ ಸರ್ಕಾರ ಬಹಳಷ್ಟು ಪ್ರಯತ್ನಿಸಿತ್ತು, ವಿರೋಧ ಪಕ್ಷಗಳ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿತ್ತು. ಆದಾಗ್ಯೂ ಮಸೂದೆಯ ಪರ 131 ಸದಸ್ಯರು ಬೆಂಬಲ ನೀಡಿದರು, ವಿರುದ್ಧವಾಗಿ 102 ಸಂಸದರು ಮತ ಚಲಾಯಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮೋದಿ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಸಂಸತ್ ನಲ್ಲಿ ಇಡಲಾಗಿತ್ತು. ಮಣಿಪುರ ಸಂಘರ್ಷ ಮೇಲೆ ವಿಪಕ್ಷಗಳ ಗದ್ದಲದ ನಡುವೆ ಈ ಬಿಲ್ ಅನ್ನು ಪಾಸ್ ಮಾಡಿಕೊಳ್ಳುವಲ್ಲಿಯೂ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಮತ್ತೆ ದೆಹಲಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸಿದೆ.