ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಎಲ್ಲಾ ಶಾಲೆಗಳಲ್ಲಿ ಮಲೆಯಾಳವನ್ನು ಪ್ರಥಮ ಭಾಷೆಯನ್ನಾಗಿಸಿ ಅದನ್ನು ಕಡ್ಡಾಯಗೊಳಿಸಲು ಹಾಗೂ ಮಲೆಯಾಳ ಭಾಷಾ ಕಲಿಕೆ ಹೇರುವ ಉದ್ದೇಶದಿಂದ ಈ ಹಿಂದಿನ ಉಮ್ಮನ್‌ಚಾಂಡಿ ನೇತೃತ್ವದ ಐಕ್ಯರಂಗ ಸರಕಾರದ ಆಡಳಿತ ವೇಳೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಲೆಯಾಳ ಭಾಷಾ ವಿಧೇಯಕಕ್ಕೆ ರಾಷ್ಟ್ರಪತಿ ಅನುಮತಿ ನಿರಾಕರಿಸಿದ್ದಾರೆ.
ಶಾಲೆಗಳಲ್ಲಿ ಮಲೆಯಾಳವನ್ನು ಪ್ರಥಮ ಭಾಷೆಯನ್ನಾಗಿಸಿ ಆ ಮೂಲಕ ಕಡ್ಡಾಯವಾಗಿ ಮಲೆಯಾಳ ಹೇರುವುದು ರಾಜ್ಯದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ನಿಷೇಧಿಸುವಂತಾಗಲಿದೆ ಎಂದು ತಿಳಿಸಿ ಅದರ ವಿರುದ್ಧ ಕೇರಳದ ಕನ್ನಡ ಮತ್ತು ತಮಿಳು ಭಾಷಾ ಅಲ್ಪ ಸಂಖ್ಯಾತರ ಸಂಘಟನೆಗಳ ನೇತೃತ್ವದಲ್ಲಿ ಅಂದಿನಿಂದಲೇ ಈ ಮಸೂದೆಯ ವಿರುದ್ಧ ತೀವ್ರ ಹೋರಾಟ ಆರಂಭಿಸಲಾಗಿತ್ತು. ಇದರಿಂದಾಗಿ ಪ್ರಸ್ತುತ ಮಸೂದೆಗೆ ಅಂದು ಕೇರಳದ ರಾಜ್ಯಪಾಲರಾಗಿದ್ದ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯೂ ಆಗಿರುವ ಪಿ.ಸದಾಶಿವನ್ ಅವರು ಆ ಮಸೂದೆಗೆ ಅಂಗೀಕಾರ ನೀಡದೆ ಅದನ್ನು ರಾಷ್ಟ್ರಪತಿಯವರ ಪರಿಗಣನೆಗೆ ಕಳುಹಿಸಿಕೊಟ್ಟಿದ್ದರು.
ಹೀಗೆ ರಾಷ್ಟ್ರಪತಿಯವರಿಗೆ ಕಳುಹಿಸಿಕೊಡಲಾದ ಪ್ರಸ್ತುತ ಮಸೂದೆಯನ್ನು ರಾಷ್ಟ್ರಪತಿಯವರಿಗಾಗಿ ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಿತ್ತು. ಅದರಂತೆ ೨೦೨೪ರಲ್ಲಿ ಕೇಂದ್ರ ಗೃಹ ಸಚಿವಾಲಯವು ಎತ್ತಿದ ಕೆಲವೊಂದು ಸಂಶಯಗಳಿಗೆ ಕೇರಳ ಸರಕಾರ ಸರಿಯಾದ ಉತ್ತರ ನೀಡಿರಲಿಲ್ಲ. ಮಾತ್ರವಲ್ಲ ಆ ಮಸೂದೆಗೆ ಅಂಗೀಕಾರ ನೀಡದೇ ಇರುವ ಶಿಫಾರಸ್ಸನ್ನು ಕೇಂದ್ರ ಗೃಹ ಸಚಿವಾಲಯ ಮಾಡಿತ್ತು. ಅದನ್ನೆಲ್ಲಾ ಪರಿಶೀಲಿಸಿ ಪ್ರಸ್ತುತ ಮಸೂದೆಗೆ ರಾಷ್ಟ್ರಪತಿಯವರು ಅನುಮತಿ ನಿರಾಕರಿಸಿ ಅದನ್ನು ಕೇರಳಕ್ಕೆ ಹಿಂತಿರುಗಿಸಿದ್ದಾರೆ.
ಮಲೆಯಾಳ ಭಾಷಾ ಮಸೂದೆಯ ಪ್ರಧಾನ ಅಂಶಗಳು
ಈ ಹಿಂದಿನ ಉಮ್ಮನ್‌ಚಾಂಡಿ ನೇತೃತ್ವದ ಐಕ್ಯರಂಗ ಸರಕಾರ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರ ನೀಡಿದ ಮಲೆಯಾಳ ಭಾಷಾ ಮಸೂದೆಯಲ್ಲಿ ಕೆಳಗಿನ ಪ್ರಧಾನ ಅಂಶಗಳು ಒಳಗೊಂಡಿವೆ. ಕೇರಳದ ಎಲ್ಲಾ ಶಾಲೆಗಳಲ್ಲಿ ಮಲೆಯಾಳವನ್ನು ಒಂದನೇ ಭಾಷೆಯನ್ನಾಗಿಸಿ ಕಲಿಸಬೇಕು. ಇದು ಮಸೂದೆಯ ಪ್ರಧಾನ ಅಂಶವಾಗಿದೆ. ಇದರ ಹೊರತಾಗಿ ಕಾನೂನು, ನಿರ್ಮಾಣ, ಜಿಲ್ಲಾ ನ್ಯಾಯಾಲಯಗಳ ವ್ಯಮಹಾರಗಳು, ಕೇರಳ ಲೋಕಸೇವಾ ಆಯೋಗ (ಪಿಎಸ್‌ಸಿ) ಪರೀಕ್ಷೆಗಳನ್ನು ಮಲೆಯಾಳ ಭಾಷೆಯಲ್ಲೇ ನಡೆಸಬೇಕು. ಮಲೆಯಾಳ ಭಾಷೆ ಕಲಿತವರಿಗೆ ಪ್ರೊಫೆಶನಲ್ (ವೃತ್ತಿಪರ) ಕೋರ್ಸ್‌ಗಳ ಪ್ರವೇಶಕ್ಕೆ ಆದ್ಯತೆ ನೀಡಬೇಕು. ಸರಕಾರಿ, ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಸಹಕಾರಿ ಇಲಾಖೆಯ ಎಲ್ಲಾ ನಾಮಫಲಕಗಳನ್ನು ಮಲೆಯಾಳ ಭಾಷೆಯಲ್ಲೇ ಅಳವಡಿಸಬೇಕು ಎಂಬ ಅಂಶಗಳೂ ಪ್ರಸ್ತುತ ಮಸೂದೆಯಲ್ಲಿ ಒಳಗೊಂಡಿದೆ.