ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಹಂಡ್ರೆಡ್ ಲೀಗ್ ಹರಾಜಿನ ನಂತರ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹೊಸ ವಿವಾದದಲ್ಲಿ ಸಿಲುಕಿದೆ. ಪಾಕಿಸ್ತಾನ ಕ್ರಿಕೆಟಿಗ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದಕ್ಕೆ ಕೆಲ ಭಾರತೀಯ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಚ್ 12ರಂದು ನಡೆದ ಹರಾಜಿನಲ್ಲಿ ಎಸ್‌ಆರ್‌ಎಚ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ತಂಡ ಅಬ್ರಾರ್ ಅವರನ್ನು ಸುಮಾರು £1,90,000 (ಸುಮಾರು 2.34 ಕೋಟಿ) ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಅಭಿಮಾನಿಗಳು ತಂಡದ ‘ಎಕ್ಸ್’ ಖಾತೆಯನ್ನು ರಿಪೋರ್ಟ್ ಮಾಡಿದ ಪರಿಣಾಮ ಅದು ಕೆಲಕಾಲ ಸ್ಥಗಿತಗೊಂಡಿದ್ದು ವರದಿಯಾಗಿದೆ.
ಇದನ್ನೂ ಓದಿ:
ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಒತ್ತಡ ಹೆಚ್ಚಾದರೆ ಆಟಗಾರನನ್ನು ಕೈಬಿಡುವ ಬಗ್ಗೆ ಫ್ರಾಂಚೈಸಿ ಒಳಗೊಳಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಂದಿದೆ. ಆದರೆ ಹರಾಜಿನಲ್ಲಿ ಅಧಿಕೃತವಾಗಿ ಖರೀದಿಸಿರುವುದರಿಂದ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅವರನ್ನು ಕೈಬಿಟ್ಟರೆ ಫ್ರಾಂಚೈಸಿಗೆ ಪೂರ್ಣ ಹಣ ಪಾವತಿಸಬೇಕಾಗುವ ಸಾಧ್ಯತೆ ಇದೆ.
ಇದೇ ವೇಳೆ ಈ ಟೂರ್ನಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಯಮಗಳಡಿ ನಡೆಯುವುದರಿಂದ ಆಟಗಾರರನ್ನು ತೆಗೆದುಹಾಕಲು ಮಂಡಳಿಯ ಅನುಮತಿ ಅಗತ್ಯವಾಗುತ್ತದೆ. ಈ ಮಧ್ಯೆ ಫ್ರಾಂಚೈಸಿ ಮಾಲಕಿ ಕಾವ್ಯ ಮಾರನ್ ಮೌನವಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಮಂಡಳಿಯೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.



