ಹೊಸದಿಗಂತ ವರದಿ ಮಡಿಕೇರಿ:
ಕಟ್ಟೆಮಾಡು ಮೃತ್ಯುಂಜಯ ದೇವಾಸ್ಥಾನದ ಆರ್ಚಕ ವಿಘ್ನೇಶ್ ಭಟ್ ಅವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹಲ್ಲೆ ಪ್ರಕರಣದ ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಡಿ ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದ ನೆಲ್ಲಮಕ್ಕಡ ಎಂ. ಶಿವಪ್ಪ(50) ಹಾಗೂ ಮೈತಾಡಿ ಗ್ರಾಮದ ಬೊಳ್ಯಪಂಡ ಎಂ.ಭೀಮಯ್ಯ ಅವರನ್ನು ಪೊಲೀಸರು ಬಂಧಿಸಿ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಶಿವಪ್ಪ ಅವರು ಹಲ್ಲೆ ಪ್ರಕರಣದ ಆರೋಪಿಗಳು ತಪ್ಪಿಸಿಕೊಳ್ಳಲು ಮಾರುತಿ 800 ಕಶರನ್ನು ನೀಡಿ ಸಹಕರಿಸಿದ್ದರೆ, ಭೀಮಯ್ಯ, ಆರೋಪಿಗಳು ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನವನ್ನು ಕಾಫಿ ತೋಟದಲ್ಲಿ ಬಚ್ಚಿಟ್ಟಿರುವುದಾಗಿ ಹೇಳಲಾಗಿದೆ.
ತಲೆ ಮರೆಸಿಕೊಂಡಿರುವ ಹಲ್ಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್.ಪಿ.ಎ, ಮಡಿಕೇರಿ ಗ್ರಾಮಾಂತರ ಇನ್ಸ್‌ಪೆಕ್ಟರ್ ಚಂದ್ರಶೇಖರ್ .ಹೆಚ್.ವಿ, ಗ್ರಾಮಾಂತರ ಠಾಣಾಧಿಕಾರಿ ಶ್ರೀನಿವಾಸ್, ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಎನ್.ಟಿ.ತಮ್ಮಯ್ಯ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಎಸ್ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಹಲ್ಲೆ ಪ್ರಕರಣದ ಆರೋಪಿ ಅನಿಲ್ ಮತ್ತು ಸಹಚರರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದ್ದು, ಇವರು ತಲೆಮರೆಸಿಕೊಳ್ಳಲು ಯಾವುದೇ ರೀತಿಯಲ್ಲಿ ಸಹಾಯ ಮಾಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿರುವ ಅವರು, ಆರೋಪಿಗಳ ಅಥವಾ ಆರೋಪಿಗಳಿಗೆ ಸಹಾಯ ಮಾಡುವವರ ಕುರಿತು ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.