ರಾಜ್ಯಸಭೆಯಲ್ಲಿ ಪ್ರಧಾನಿ: ಕಾಂಗ್ರೆಸ್ ಮೇಲೆ ಮಹಾಪ್ರಹಾರ, ಕೊಟ್ಟರು ಕೋವಿಡ್ ಸಂಕಷ್ಟದಲ್ಲಿ ಮಾಡಿದ ಕೆಲಸಗಳ ವಿವರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ರಾಜ್ಯಸಭೆಯಲ್ಲಿ ನಡೆದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಪ್ರತಿಪಕ್ಷ ಕಾಂಗ್ರೆಸ್ಸಿನ ನಡೆಗಳನ್ನು ವಾಗ್ಬಾಣಗಳಲ್ಲಿ ಪ್ರಹರಿಸಿದರಲ್ಲದೇ, ಕೋವಿಡ್ ಥರದ ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರ ಸನ್ನಿವೇಶ ನಿರ್ವಹಿಸಿ ಅರ್ಥವ್ಯವಸ್ಥೆಯನ್ನೂ ಸುಧಾರಿಸಿದ ಬಗ್ಗೆ ಸಮರ್ಥಿಸಿಕೊಂಡರು.

ಪ್ರಧಾನಿ ಮಾತುಗಳ ಪ್ರಮುಖಾಂಶಗಳು:
• ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ದೇಶದ 130 ಕೋಟಿ ಜನರ ಶಿಸ್ತು ಹಾಗೂ ಇಚ್ಛಾಶಕ್ತಿಯ ಬಗ್ಗೆ ಇಡೀ ವಿಶ್ವದ ಮೆಚ್ಚುಗೆ ಇದೆ.
• ಕೊರೋನಾ ಕಾಲದಲ್ಲಿ ಕೃಷಿಕರಿಗೆ ಲಾಕ್ ಡೌನ್ ಬದಲಿಗೆ ರೈತರಿಂದ ಬಂಪರ್ ಉತ್ಪಾದನೆ.
ಕೋವಿಡ್ ಸಮಯದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ 23 ಬಾರಿ ಸಭೆ ನಡೆಸಿ ಅವರೆಲ್ಲರ ಅಭಿಪ್ರಾಯಗಳನ್ನು ಪಡೆದೇ ಕಾರ್ಯತಂತ್ರ ರೂಪಿಸಲಾಯಿತು. ಇದು ಲೋಕತಂತ್ರವನ್ನು ಬಲಗೊಳಿಸುವ ಬಹುದೊಡ್ಡ ನಡೆ.
• 5 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಪೂರೈಕೆ.
• ಮೂಲ ಸೌಕರ್ಯ ಯೋಜನೆಗಳಿಂದ ಉದ್ಯೋಗಾವಕಾಶಕ್ಕೆ ಪ್ರಯತ್ನ.
• NASCOM ಪ್ರಕಾರ 2017ರಿಂದ 27 ಲಕ್ಷ ಜನರಿಗೆ ಉದ್ಯೋಗ.
• ಆತ್ಮನಿರ್ಭರತೆ, ಪಿಎಲ್ ಐ ಯೋಜನೆಗಳಿಂದ ಮೊಬೈಲ್ ತಯಾರಿಕೆಯಲ್ಲಿ ಭಾರತ ಮುಂದು.
• ಭಾರತದಲ್ಲಿ ಮಾತ್ರ ಹೆಚ್ಚಿನ ಬೆಳವಣಿಗೆ ಹಾಗೂ ಮಧ್ಯಮ ಹಣದುಬ್ಬರ.
• 80 ಕೋಟಿ ಜನರಿಗೆ ಉಚಿತ ಪಡಿತರ.
• ಭರದಿಂದ ಸಾಗುತ್ತಿದೆ ಮನೆ ನಿರ್ಮಾಣ ಯೋಜನೆ
• ಈವರೆಗೆ ಪ್ರಾರ್ಥಮಿಕ ಆರೋಗ್ಯ ಕೇಂದ್ರವಾಗಿ 80 ಸಾವಿರ ಆಯುಷ್ಮಾನ್ ಭಾರತ್ ಕೇಂದ್ರ ಸ್ಥಾಪನೆ.
• ಇವತ್ತು ಮಹಿಳೆ ಮತ್ತು ಪುರುಷ ಎಲ್ಲದರಲ್ಲೂ ಸಮಾನರು ಎಂದಮೇಲೆ ಅವರ ಮದುವೆ ವಯಸ್ಸಿನಲ್ಲಿ ಭಿನ್ನತೆ ಏಕಿರಬೇಕು? ಮಹಿಳೆಯರ ಮದುವೆಯ ಕನಿಷ್ಠ ವಯೋಮಿತಿ ಹೆಚ್ಚಿಸಲಾಗಿದೆ.
• ದೇಶದಲ್ಲಿ ಭೂಸೇನೆ, ನೌಕಾಪಡೆ, ವಾಯುಸೇನೆಯಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚು.
• ಮಾತೃತ್ವ ರಜಾ ಅವಧಿ ಹೆಚ್ಚಾಗಿದೆ, ಬೇಟಿ ಬಚಾವ್‌-ಬೇಟಿ ಪಡಾವ್‌ ಮೂಲಕ ಹೆಣ್ಣು ಭ್ರೂಣ ಹತ್ಯೆ ಕಡಿಮೆ ಆಗಿದೆ.
• ನಾವು ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದೆವು. ಇದರಿಂದ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವೇ ಸಮಾಧಾನ ಸಿಕ್ಕಿತು ಎಂದುಕೊಳ್ಳಬೇಡಿ. ಹೀಗೆ ಬೇಕಾಬಿಟ್ಟಿ ವಿಚ್ಛೇದನದಿಂದ ಬಳಲಿದ್ದ ಆ ಹೆಣ್ಣಿನ ಅಪ್ಪ, ಸಹೋದರ ಎಲ್ಲರಿಗೂ ಸಮಾಧಾನ ಸಿಗುವಂತಾಗಿದೆ.

ಕಾಂಗ್ರೆಸ್ ಮೇಲೆ ಪ್ರಹಾರ
ಈ ಸದನದಲ್ಲಿ ಕಾಂಗ್ರೆಸ್ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯನ್ನು ಕೇಳಲಾಗಿದೆ, ಅದಕ್ಕೆ ನನ್ನದೇ ರೀತಿಯಲ್ಲಿ ಉತ್ತರಿಸುತ್ತೇನೆ ಎಂದ ಪ್ರಧಾನಿ ಮೋದಿ ವಾಗ್ಬಾಣಗಳ ಮಳೆಯನ್ನೇ ಸುರಿಸಿದರು.
ಕಾಂಗ್ರೆಸ್ ಇಲ್ಲದಿದಿದ್ದರೆ, ದೇಶದಲ್ಲಿ ತುರ್ತು ಪರಿಸ್ಥಿತಿ, ಜಾತಿ ರಾಜಕಾರಣ, ಸಿಖ್ ರ ಹತ್ಯೆ, ಕಾಶ್ಮೀರಿ ಪಂಡಿತರು ನೆಲೆ ಕಳೆದುಕೊಳ್ಳುವುದು ಇವ್ಯಾವವೂ ಆಗುತ್ತಿರಲಿಲ್ಲ ಎಂದರು.
ರಾಜಕಾರಣದಲ್ಲಿ ಪರಿವಾರ ವಾದವನ್ನು ಸ್ಥಾಪಿಸಿದಾಗ ಅದರಲ್ಲಿ ಮೊದಲು ಹೊಡೆತ ತಿನ್ನುವವರು ನಿಜವಾದ ಪ್ರತಿಭೆಗಳು ಎಂದು ಕಾಂಗ್ರೆಸ್ ಮೇಲೆ ಪರೋಕ್ಷ ಪ್ರಹಾರ ಮಾಡಿದರು ಪ್ರಧಾನಿ ಮೋದಿ.
ಕೇಂದ್ರ ಸರ್ಕಾರ ಕರೆದ ಸರ್ವಪಕ್ಷ ಸಭೆಗೆ ಗೈರಾದ ಹಲವು ವಿಪಕ್ಷ ಸದಸ್ಯರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಅವರು 1975ರಲ್ಲಿ ದೇಶಕ್ಕೆ ಕಂಟಕ ತರಿಸಿದ್ದ ಜನರಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ನಗರ ನಕ್ಸಲರ ಹಿಡಿತದಲ್ಲಿದೆ. ಅದರ ಸಿದ್ಧಾಂತ ಮತ್ತು ವಿಚಾರಗಳನ್ನು ನಗರ ನಕ್ಸಲರೇ ನಿಯಂತ್ರಿಸುತ್ತಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!