ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಮೀಬಿಯಾಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಮೋಸ್ಟ್ ಏಷ್ಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ಅನ್ನು ನೀಡಿ ಗೌರವಿಸಲಾಯಿತು.
ನಮೀಬಿಯಾ ಅಧ್ಯಕ್ಷರಾದ ನೆಟುಂಬೊ ನಂದಿ- ನದೈಟ್ವ್ ಈ ಗೌರವ ಪ್ರದಾನ ಮಾಡಿದರು.
5 ದೇಶಗಳ ಪ್ರವಾಸದ ಅಂಗವಾಗಿ ಮೋದಿ ನಮೀಬಿಯಾಕ್ಕೆ ತೆರಳಿದ್ದಾರೆ. ಮಂಗಳವಾರವಷ್ಟೇ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಅನ್ನು ಪ್ರದಾನ ಮಾಡಲಾಗಿತ್ತು.
ಮೋದಿ ಅವರ ಮೊದಲ ನಮೀಬಿಯಾ ಭೇಟಿ ಇದಾಗಿದೆ. ಈ ಮೂಲಕ ನಮೀಬಿಯಾಕ್ಕೆ ಒಟ್ಟು ಮೂವರು ಭಾರತದ ಪ್ರಧಾನಿಗಳು ಭೇಟಿ ನೀಡಿದಂತಾಗಿದೆ. 2014ರಿಂದ ಪ್ರಧಾನಿಯಾಗಿರುವ ಮೋದಿ ಈ 11 ವರ್ಷಗಳಲ್ಲಿ ಇದುವರೆಗೆ ಒಟ್ಟು 27 ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರಶಸ್ತಿಯನ್ನು ಪಡೆದಿರುವುದು ನನಗೆ ತುಂಬಾ ಹೆಮ್ಮೆ ಮತ್ತು ಗೌರವದ ವಿಷಯ. ನಮೀಬಿಯಾ ಸರ್ಕಾರ, ಅಧ್ಯಕ್ಷರು ಮತ್ತು ಅಲ್ಲಿನ ಜನತೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. 140 ಕೋಟಿ ಭಾರತೀಯರ ಪರವಾಗಿ ನಾನು ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ’ ಎಂದು ಮೋದಿ ತಿಳಿಸಿದ್ದಾರೆ.
ವಿಶಿಷ್ಟ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ನೀಡುವ ಈ ಪ್ರಶಸ್ತಿಯನ್ನು ನಮೀಬಿಯಾ ಸರ್ಕಾರ 1995ರಲ್ಲಿ ಸ್ಥಾಪಿಸಿತು. ನಮೀಬಿಯಾದ ವಿಶಿಷ್ಟ ಮತ್ತು ಪ್ರಾಚೀನ ಮರುಭೂಮಿ ಸಸ್ಯ ವೆಲ್ವಿಟ್ಚಿಯಾ ಮಿರಾಬಿಲಿಸ್‌ನ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.
‘ನಮೀಬಿಯಾ ಮತ್ತು ಜಾಗತಿಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಶಾಂತಿ ಹಾಗೂ ನ್ಯಾಯದ ಉತ್ತೇಜನಕ್ಕೆ ಗಣನೀಯ ಕೊಡುಗೆ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ದಿ ಮೋಸ್ಟ್ ಏಷ್ಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರಶಸ್ತಿ ನೀಡುವ ಗೌರವ ನನಗೆ ಸಿಕ್ಕಿದೆ’ ಎಂದು ನೆಟುಂಬೊ ನಂದಿ- ನದೈಟ್ವ್ ಈ ಸಂದರ್ಭದಲ್ಲಿ ತಿಳಿಸಿದರು.