ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಜ್ವಿಗಾರ್ ಮೇಳದಡಿ ವಿವಿಧ ಇಲಾಖೆಗಳಿಗೆ ನೇಮಕಗೊಂಡಿರುವ 71 ಸಾವಿರ ಯುವಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ‘ನೇಮಕಾತಿ ಪತ್ರ’ಗಳನ್ನು ವಿತರಿಸಿದರು.
ದೇಶಾದ್ಯಂತ 45 ಸ್ಥಳಗಳಲ್ಲಿ ಈ ರೋಜ್‌ಗಾರ್ ಮೇಳ ನಡೆಯುತ್ತಿದೆ. ಕೇಂದ್ರ ಸರ್ಕಾರದ ಇಲಾಖೆಗಳು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೆಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 9 ವರ್ಷಗಳಲ್ಲಿ ಭಾರತ ಸರ್ಕಾರವು ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಇದನ್ನು ಹೆಚ್ಚು ಪಾರದರ್ಶಕ ಮತ್ತು ನ್ಯಾಯಯುತವಾಗಿಸಲು ಒತ್ತು ನೀಡಲಾಗಿದೆ. ಪ್ರತಿಯೊಬ್ಬರ ಅಭಿವೃದ್ಧಿಯ ಮಂತ್ರದೊಂದಿಗೆ ಭಾರತ ಮುನ್ನಡೆಯುತ್ತಿದೆ ಎಂದರು.
ಭಾರತ ಸರ್ಕಾರವು ಮುದ್ರಾ ಯೋಜನೆಯಡಿ ಯುವಕರಿಗೆ 23 ಸಾವಿರ ಕೋಟಿ ನೀಡಿದೆ. ಈ ಹಣದಿಂದ ಎಲ್ಲರೂ ಒಂದಲ್ಲ ಒಂದು ಉದ್ಯೋಗ ಆರಂಭಿಸಿದ್ದಾರೆ. ಈ ಪೈಕಿ 8-9 ಕೋಟಿ ಜನ ಸ್ವತಂತ್ರವಾಗಿ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು.
ಪಿಎಲ್‌ಐ ಯೋಜನೆಯಡಿಯಲ್ಲಿ ಉತ್ಪಾದನೆಗೆ ಭಾರತ ಸರ್ಕಾರ ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ನೆರವು ನೀಡುತ್ತಿದೆ. ಭಾರತವನ್ನು ವಿಶ್ವದ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ ಈ ಮೊತ್ತವು ಲಕ್ಷಾಂತರ ಯುವಕರಿಗೆ ಉದ್ಯೋಗಕ್ಕೂ ಸಹಾಯ ಮಾಡುತ್ತದೆ. ಕಳೆದ 9 ವರ್ಷಗಳಲ್ಲಿ ಕೆಲಸದ ಸ್ವರೂಪವೂ ಬಹಳ ವೇಗವಾಗಿ ಬದಲಾಗಿದೆ. ಯುವಕರಿಗೆ ಹೊಸ ಹೊಸ ಕ್ಷೇತ್ರಗಳು ಹುಟ್ಟಿಕೊಂಡಿವೆ ಎಂದು ತಿಳಿಸಿದರು.