ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಫ್ರಾನ್ಸ್ ಮೂಲದ ‘ಏರ್ ಬಸ್’ ಮತ್ತು ಭಾರತದ ‘ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್’ (ಟಿಎಎಸ್ಎಲ್) ಜಂಟಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿರುವ ದೇಶದ ಪ್ರಪ್ರಥಮ ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುವಲ್ ಮೂಲಕ ಉದ್ಘಾಟಿಸಿದರು.
ವೇಮಗಲ್ ಘಟಕದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಮತ್ತು ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು.
ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್ ನಂತರ ಜಗತ್ತಿನ ನಾಲ್ಕನೇ ಎಚ್125 (H125) ಹೆಲಿಕಾಪ್ಟರ್ ಅಂತಿಮ ಜೋಡಣೆ ಘಟಕ ಕರ್ನಾಟಕದಲ್ಲಿ ಆರಂಭವಾಗಿದೆ. ಇದು ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲಿ ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ತಯಾರಿಸಲಾಗುವುದು ಮತ್ತು ಹಂತ ಹಂತವಾಗಿ ಉತ್ಪಾದನೆಯನ್ನು ಹೆಚ್ಚಿಸಿ 500ರ ಗಡಿ ತಲುಪುವ ಗುರಿ ಹೊಂದಲಾಗಿದೆ.
ಈ ಘಟಕದಿಂದ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್ ಮತ್ತು ಎಂಜಿನ್ ಬಿಡಿಭಾಗಗಳ ತಯಾರಿಕಾ ವಲಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (SME) ಹೆಚ್ಚಿನ ಅವಕಾಶಗಳು ಸಿಗಲಿವೆ. ಇದು ರಾಜ್ಯದ ಯುವಜನತೆಗೆ ಆಧುನಿಕ ತಂತ್ರಜ್ಞಾನ ವಲಯದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ.



