Friday, November 21, 2025

ದಕ್ಷಿಣ ಆಫ್ರಿಕಾಗೆ ಬಂದಿಳಿದ ಪ್ರಧಾನಿ ಮೋದಿ: ಏರ್​ಪೋರ್ಟ್​ನಲ್ಲಿ ಸಿಕ್ಕಿತು ಅದ್ದೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ದಕ್ಷಿಣ ಆಫ್ರಿಕಾಕ್ಕೆ ಭೇಟಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜೋಹಾನ್ಸ್​ಬರ್ಗ್ ನಗರಕ್ಕೆ ಕಾಲಿಟ್ಟರು. ಏರ್​ಪೋರ್ಟ್​ನಲ್ಲಿ ಪ್ರಧಾನಿವರಿಗೆ ಆತ್ಮೀಯ ಸ್ವಾಗತ ಸಿಕ್ಕಿತು.

ಸಾಂಸ್ಕೃತಿಕ ನೃತ್ಯದ ಮೂಲಕ ಮೋದಿ ಆಗಮನವನ್ನು ಸೌತ್ ಆಫ್ರಿಕನ್ನರು ಸಂಭ್ರಮಿಸಿದರು. ಸೌತ್ ಆಫ್ರಿಕಾದ ಅತಿದೊಡ್ಡ ನಗರವೆನಿಸಿದ ಇಲ್ಲಿಯೇ ಜಿ20 ಶೃಂಗಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ಜೋಹಾನ್ಸ್​ಬರ್ಗ್ ನಗರಕ್ಕೆ ಆಗಮಿಸಿದ್ದಾರೆ.

20ನೇ ಜಿ20 ಶೃಂಗಸಭೆ. ಗ್ಲೋಬಲ್ ಸೌತ್ ಎಂದು ಬಣ್ಣಿಸಲಾಗುವ ಅಭಿವೃದ್ಧಿಶೀಲ ದೇಶಗಳಲ್ಲಿ ನಡೆಯುವ ಸತತ ನಾಲ್ಕನೇ ಜಿ20 ಶೃಂಗಸಭೆಯೂ ಇದು ಹೌದು. ಆಫ್ರಿಕನ್ ನೆಲದಲ್ಲಿ ನಡೆಯುವ ಮೊದಲ ಜಿ20 ಸಮಿಟ್ ಇದು. ಆಫ್ರಿಕನ್ ದೇಶಗಳನ್ನು ಜಿ20 ಗುಂಪಿಗೆ ಸೇರಿಸಲು ಭಾರತದ ಪಾತ್ರ ಪ್ರಮುಖವಾಗಿತ್ತು ಎಂಬುದು ವಿಶೇಷ. ಈ ವರ್ಷದ ಜಿ20 ಶೃಂಗಸಭೆಯ ಥೀಮ್ ‘ಐಕ್ಯತೆ, ಸಮಾನತೆ ಮತ್ತು ಸುಸ್ಥಿರತೆ’ ಎಂದು ನಿಗದಿ ಮಾಡಲಾಗಿದೆ.

ಟ್ರಂಪ್, ಜಿನ್​ಪಿಂಗ್ ಗೈರು?
ಜಿ20 ಗುಂಪಿನಲ್ಲಿರುವ ಎರಡು ಅತಿ ಬಲಿಷ್ಠ ದೇಶಗಳ ನಾಯಕರು ಈ ಬಾರಿಯ ಶೃಂಗಸಭೆಗೆ ಗೈರಾಗಲಿರುವುದು ಗಮನಾರ್ಹ ಸಂಗತಿ. ಸೌತ್ ಆಫ್ರಿಕಾದಲ್ಲಿ ಬಿಳಿಯ ಸಮುದಾಯದವರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಜಿ20 ಸಮಿಟ್ ಅನ್ನು ಬಾಯ್ಕಾಟ್ ಮಾಡಿದ್ದಾರೆ. ಇನ್ನೊಂದೆಡೆ, ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಅವರೂ ಕೂಡ ಪ್ರವಾಸ ವೇಳಾಪಟ್ಟಿ ಕಡಿಮೆಗೊಳಿಸುವ ಉದ್ದೇಶದಿಂದ ಶೃಂಗಸಭೆ ಪ್ರವಾಸಕ್ಕೆ ಕತ್ತರಿ ಹಾಕಿದ್ದಾರೆ ಎನ್ನಲಾಗಿದೆ.

error: Content is protected !!