ಹೊಸದಿಗಂತ ಡಿಜಿಟಲ್ ಡೆಸ್ಕ್:
12ನೇ ಶತಮಾನದ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ಆಡಳಿತಗಾರ ಬಸವಣ್ಣ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ”ಬಸವ ಜಯಂತಿಯ ಶುಭ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ಅಂಚಿನಲ್ಲಿರುವವರ ಮೇಲೆತ್ತಲು ಅವರ ಅವಿಶ್ರಾಂತ ಪ್ರಯತ್ನಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ” ಎಂದಿದ್ದಾರೆ.
ಶುಭಾಶಯದ ಜೊತೆಗೆ ವಿವಿಧ ಸಂದರ್ಭದಲ್ಲಿ ಬಸವಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ವಿಡಿಯೋವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.
”ಬಸವಣ್ಣನವರು ಒಬ್ಬ ಮಹಾನ್ ಕವಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿ ಹೊರಹೊಮ್ಮಿದರು. ಕಾವ್ಯದ ಮೂಲಕ ಅವರು ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು. ಲಿಂಗಭೇದ ಅಥವಾ ಸಾಮಾಜಿಕ ಪೂರ್ವಾಗ್ರಹವನ್ನು ತಿರಸ್ಕರಿಸಿದರು ಹಾಗೂ ಅವರು ಇಷ್ಟಲಿಂಗ ಹಾರವನ್ನು ಪರಿಚಯಿಸಿದರು” ಎಂದಿದ್ಧಾರೆ. ಬಸವ ಜಯಂತಿ ಜೊತೆಗೆ ಇಂದು ಅಕ್ಷಯ ತೃತೀಯ ಹಿನ್ನೆಲೆಯಲ್ಲಿಯೂ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ. ವಿಕಸಿತ್ ಭಾರತ ನಿರ್ಮಾಣದ ಸಂಕಲ್ಪಕ್ಕೆ ಹೊಸ ಬಲವನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.