ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಚುನಾವಣಾ ಅಖಾಡದಲ್ಲಿ ಬಿರುಸಿನ ಮತ ಪ್ರಚಾರದಲ್ಲಿ ಮಾತುಗಳು ಹೆಚ್ಚುತ್ತಿದ್ದು, ಹೀಗೆ ಎಲ್ಲೆ ಮೀರಿದ ಇಬ್ಬರು ನಾಯಕರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಮಗ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಆಯೋಗ ನೋಟಿಸ್ ನೀಡಿದೆ. ಇತ್ತ ಸೋನಿಯಾ ಗಾಂಧಿ ವಿಷಕನ್ಯೆ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಚುನಾವಣಾ ಆಯೋಗ ಪ್ರಿಯಾಂಕ್ ಖರ್ಗೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಇಬ್ಬರು ನಾಯಕರು ಮೇ.4ರೊಳಗೆ ತಮ್ಮ ತಮ್ಮ ವಿವಾದಾತ್ಮಕ ಹೇಳಿಕೆಗೆ ಉತ್ತರ ನೀಡಬೇಕು ಎಂದು ಚುನಾವಣಾ ಆಯೋಗ ನೋಟೀಸ್‌ನಲ್ಲಿ ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಿವಾದ ಸೃಷ್ಟಿಸಿದ್ದರು. ಮೋದಿ ವಿಷ ಸರ್ಪ ಎಂದಿದ್ದ ಖರ್ಗೆ ವಿವಾದ ಕಾಂಗ್ರೆಸ್ ಕೈಸುಟ್ಟಿತ್ತು. ಇತ್ತ ಪುತ್ರ ಪ್ರಿಯಾಂಕ್ ಖರ್ಗೆ, ಮೋದಿಯನ್ನು ನಾಲಾಯಕ್ ಎಂದಿದ್ದರು. ಪ್ರಧಾನಿ ಮೋದಿಯವರು ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡಕ್ಕೆ ಬಂದು ಬಂಜಾರಾ ಸಮುದಾಯದವರಿಗೆ ಮನೆಗಳ ಹಕ್ಕು ಪತ್ರ ನೀಡುವಾಗಿನ ಸಮಾರಂಭದಲ್ಲಿ ಆಡಿದ ಮಾತುಗಳನ್ನು ಉಲ್ಲಖಿಸುತ್ತ ರೋಶಾವೇಶದಲ್ಲಿ ಪ್ರಧಾನಿಯವರನ್ನ ‘ನಾಲಾಯಕ್’ ಎಂದಿದ್ದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಿತು. ದಿಲ್ಲಿಯಲ್ಲಿ ಕುಳಿತವ ‘ನಾಲಾಯಕ್ ಬೇಟಾ’ ಇದ್ದಾಗ ಇನ್ನೇನು ಆಗಲು ಸಾಧ್ಯ? ಎಂದು ಪ್ರಿಯಾಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನೇರವಾಗಿಯೇ ಟೀಕಾ ಪ್ರಹಾರ ಮಾಡಿದ್ದರು. ದಿಲ್ಲಿಯಲ್ಲಿ ಕುಳಿತ ಮಗ ಸಮರ್ಥ ಇರಬೇಕು ತಾನೆ? ಅವನೇ ಸಮರ್ಥ ಇಲ್ಲಂತಾದರೆ ಬಂಜಾರಾ ಸಮಾಜಕ್ಕೆ ನ್ಯಾಯ ಹೇಗೆ ಸಿಕ್ಕೀತು? ಮೀಸಲಾತಿ ಗೊಂದಲ ಹುಟ್ಟುಹಾಕಿ ಬಂಜಾರಾ ಸೇರಿದಂತೆ ಎಲ್ಲಾ ಸಮಾಜದವರಿಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದಿದ್ದರು.
ಇತ್ತ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸೋನಿಯಾ ಗಾಂಧಿ ವಿಷಕನ್ಯೆ ಎಂದಿದ್ದರು.