ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ನಿಮಿತ್ತ ಬ್ರಿಟನ್ ರಾಜಕುಮಾರ 3ನೇ ಚಾರ್ಲ್ಸ್ ಅವರು ಉಡುಗೊರೆಯಾಗಿ ಕಳುಹಿಸಿದ ಕದಂಬ್ ಸಸಿಯನ್ನು ದೆಹಲಿಯಲ್ಲಿನ 7, ಲೋಕ್ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಇಂದು ಪ್ರಧಾನಿ ನೆಟ್ಟಿದ್ದಾರೆ ಎಂದು ಪ್ರಧಾನಿಗಳ ಗೃಹ ಕಚೇರಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಎಕ್ ಪೇಡ್ ಮಾ ಕೆ ನಾಮ್’ (ಅಮ್ಮನ ಹೆಸರಲ್ಲಿ ಒಂದು ಮರ) ಎಂಬ ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಈ ಸಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನ್ ಕಚೇರಿ ತಿಳಿಸಿ, ಸಾಮಾಜಿಕ ಜಾಲತಾಣದಲ್ಲಿ ಗಿಡದ ಚಿತ್ರ ಹಂಚಿಕೊಂಡಿತ್ತು. ಹಾಗೇ ಈ ಉಡುಗೊರೆಯು ಪರಿಸರ ಉಳಿಸುವಿಕೆಗೆ ಪ್ರಧಾನಿ ಮೋದಿ ಮತ್ತು 3ನೇ ಚಾರ್ಲ್ಸ್ ಅವರ ಬದ್ಧತೆಯನ್ನು ಪ್ರತಿಬಿಂಬಿಸಲಿದೆ ಎಂದು ತಿಳಿಸಿತ್ತು.
ಈ ಸಸಿಯನ್ನು ಪ್ರಧಾನಿಗಳ ಅಧಿಕೃತ ನಿವಾಸದ ಮನೆಯಂಗಳದಲ್ಲಿ ಇಂದು ಮೋದಿ ನೆಟ್ಟಿದ್ದು, ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸ್ನೇಹ ಮತ್ತು ಪರಿಸರ ಸುಸ್ಥಿರತೆಯ ಬದ್ಧತೆಯ ಹಂಚಿಕೆಯನ್ನು ಸಂಕೇತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಏನಿದು ‘ಎಕ್ ಪೇಡ್ ಮಾ ಕೆ ನಾಮ್’ ಯೋಜನೆ
ಜೂನ್ನಲ್ಲಿ ಗುಜರಾತ್ನ ಕಚ್ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿಗೆ 1971ರ ಯುದ್ದದಲ್ಲಿ ಧೈರ್ಯ ತೋರಿದ್ದ ಮಹಿಳೆಯರ ಗುಂಪೊಂದು ಸಸಿಯನ್ನು ಉಡುಗೊರೆಯಾಗಿ ನೀಡಿತ್ತು. ಈ ಸಸಿಯನ್ನು ತಮ್ಮ ನಿವಾಸದಲ್ಲಿ ನೆಡುವುದಾಗಿ ಪ್ರಧಾನಿ ಮೋಡಿ ಅವರು ಭರವಸೆ ನೀಡಿದ್ದರು. ಅದರಂತೆ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಿಂಧೂರ ಸಸಿ ಎಂದು ನಾಮಕರಣ ಮಾಡಿ ಈ ಗಿಡವನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಗೌರವಾರ್ಥವಾಗಿ ನೆಟ್ಟಿದ್ದರು. ಹಾಗೇ ಈ ಸಮಯದಲ್ಲಿ ಎಲ್ಲರಿಗೂ ಗಿಡ ನೆಡುವಂತೆ ಪ್ರಧಾನಿಗಳು ಮನವಿ ಮಾಡಿದ್ದರು.
ಜೀವನ ನಿರ್ವಹಣೆಯಲ್ಲಿ ಪೋಷಿಸುವ ತಾಯಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸಸಿಯನ್ನು ನಡೆಲಾಗಿದೆ. ಮರಗಳು ಜೀವನದ ಅಡಿಪಾಯ ಮತ್ತು ತಾಯಿಯಂತೆ ಅವು ಮುಂದಿನ ಪೀಳಿಗೆಗೆ ಪೋಷಣೆ, ರಕ್ಷಣೆ ಮತ್ತು ಭವಿಷ್ಯವನ್ನು ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ತಾಯಂದಿರ ಗೌರವಾರ್ಥವಾಗಿ ಮರವನ್ನು ನೆಡಲು ಪ್ರತಿಯೊಬ್ಬರು ಮುಂದಾಗಬೇಕು. ಇದು ಸ್ಮಾರಕದ ಜೊತೆಗೆ ಪರಿಸರ ಸಂರಕ್ಷಣೆಯ ತುರ್ತು ಅಗತ್ಯವನ್ನು ಸಹ ತಿಳಿಸುತ್ತದೆ ಎಂದು ತಿಳಿಸಲಾಗಿತ್ತು